– ಸಕ್ಕರೆ ಸಚಿವರ ಹಗರಣ ಶೀಘ್ರವೇ ಬಯಲಿಗೆ ಬರುತ್ತೆ: ಬಿಜೆಪಿ ಶಾಸಕ ಹೊಸ ಬಾಂಬ್
ವಿಜಯಪುರ: ವಿಜಯೇಂದ್ರನೇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಇಟ್ಟುಕೊಳ್ಳಲಿ. ನಾನು ರಾಜ್ಯಾಧ್ಯಕ್ಷನಾಗುತ್ತೇನೆಂದು ಹೇಳಿದ್ದೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ತಿಳಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ವಿಜಯೇಂದ್ರ ಜೊತೆ ಹೊಂದಾಣಿಕೆ ಅಗುವಂತೆ ಮನವೊಲಿಕೆ ಯತ್ನ ವಿಚಾರವಾಗಿ ವಿಜಯಪುರದಲ್ಲಿ (Vijayapura) ಯತ್ನಾಳ್ ಪ್ರತಿಕ್ರಿಯಿಸಿ, ಅಂಥ ಪ್ರಯತ್ನಗಳು ನಡೆಯುತ್ತವೆ. ನಾನು ಕಾಂಪಿಟೇಟರ್ ಇದ್ದೇನೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವುದಾಗಿ ನನಗೆ ಹೇಳಿದರು. ವಿಜಯೇಂದ್ರನೇ (Vijayendra) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಇಟ್ಟುಕೊಳ್ಳಲಿ. ನಾನು ರಾಜ್ಯಧ್ಯಕ್ಷನಾಗುತ್ತೇನೆಂದು ಹೇಳಿದ್ದೇನೆ ಎಂದರು. ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ – ಜೆಡಿಎಸ್ ಜೊತೆ ಚರ್ಚಿಸಿ ಅಭ್ಯರ್ಥಿ ಆಯ್ಕೆ: ವಿಜಯೇಂದ್ರ
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಡಿಕೆಶಿ ಅಥವಾ ಡಿ.ಕೆ.ಸುರೇಶ್ ಸ್ಪರ್ಧೆ ಮಾಡುವ ಸಾಧ್ಯತೆ ಕುರಿತು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ಆದರೆ ಚುನಾವಣೆ ಸ್ಪರ್ಧೆಯ ವಿಚಾರದಲ್ಲಿ ಚುನಾವಣಾ ಆಯೋಗ ಕೆಲ ಕಾಯ್ದೆಗಳನ್ನ ಮಾರ್ಪಾಡು ಮಾಡಬೇಕು. ಒಂದು ಕ್ಷೇತ್ರದಲ್ಲಿ ಸಂಸದ, ಶಾಸಕರಾಗಿದ್ದವರು ಮತ್ತೊಂದು ಕ್ಷೇತ್ರಕ್ಕೆ ಸ್ಪರ್ಧೆ ಮಾಡಲು ಅವಕಾಶ ನೀಡಬಾರದು. ಈ ಕುರಿತು ಹೊಸ ಕಾನೂನು ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ನನಗೂ ಕೂಡ ಬಾಗಲಕೋಟೆ, ಬೆಳಗಾವಿಯಿಂದ ಸ್ಪರ್ಧೆ ಮಾಡುವಂತೆ ಹೇಳಲಾಗಿತ್ತು. ನಾನು ಸ್ಪರ್ಧೆ ಮಾಡಲಿಲ್ಲ. ಒಂದು ಕ್ಷೇತ್ರದಲ್ಲಿ ಶಾಸಕರಾಗಿದ್ದವರು, ಸಚಿವರಾಗಿದ್ದರೂ ಕೂಡ ಉಪ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುವಂತಾಗಬಾರದು. ಈ ನಿಟ್ಟಿನಲ್ಲಿಯೂ ಕೂಡ ಕಾನೂನು ಜಾರಿಯಾಗಬೇಕು. ಉಪ ಚುನಾವಣೆ ನಡೆಯುವುದರಿಂದ ನೀತಿ ಸಂಹಿತೆ ಎರಡು ತಿಂಗಳು ಜಾರಿಯಲ್ಲಿರುತ್ತದೆ. ಇದರಿಂದ ಅಭಿವೃದ್ಧಿ ಕೆಲಸ ಕಾಮಗಾರಿಗಳು ಆಗಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಹಾವೇರಿಯಲ್ಲಿ ಸ್ಪಿರಿಟ್ ಲಾರಿಯ ಟೈಯರ್ ಬ್ಲಾಸ್ಟ್ – ತಪ್ಪಿದ ದೊಡ್ಡ ದುರಂತ!
ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ. ಈಗ ಬಸ್ ದರವನ್ನು ಏರಿಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ. ಗ್ಯಾರಂಟಿ ಯೋಜನೆಗಳು ಜೀವಂತವಾಗಿರಲು ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ. ಬೆಲೆ ಏರಿಕೆ ಮಾಡದಿದ್ದರೆ ಸರ್ಕಾರಿ ನೌಕರರ ಸಂಬಳ ನೀಡಲು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ಕಾಂಗ್ರೆಸ್ ಸಚಿವರು, ಶಾಸಕರು ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ ಎನ್ನುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಬೇಡವೆಂದು ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಿದರೆ ಕಾಂಗ್ರೆಸ್ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ ಎಂದು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ. ಮದ್ಯದ ದರವನ್ನು ಏರಿಕೆ ಮಾಡುತ್ತಿದ್ದಾರೆ. ಮದ್ಯದ ದರ ಏರಿಕೆ ಮಾಡಿದರೆ ಮಾಡಲಿ ಎಂದರು.
ರಾಜ್ಯ ಸರ್ಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಎಲ್ಲ ಮಂತ್ರಿಗಳು ಲೂಟಿ ಮಾಡುತ್ತಿದ್ದಾರೆ. ಕಂದಾಯ ಸಚಿವರ ಕ್ಷೇತ್ರದಲ್ಲಿಯೇ ಇಬ್ಬರು ಸಚಿವರು ಜಮೀನು ನುಂಗುವ ಹುನ್ನಾರ ನಡೆಸಿದ್ದಾರೆ. ಬೆಂಗಳೂರಿನ ಹೃದಯ ಭಾಗದಲ್ಲಿನ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಜಮೀನು ನುಂಗುವ ಹುನ್ನಾರ ನಡೆದಿದೆ. 20 ಎಕರೆ ಜಮೀನನ್ನು ಬೇನಾಮಿಯಾಗಿ ಕಬಳಿಸಲು ನಕಲಿ ಕಾಗದ ಪತ್ರ ಮಾಡಿ ಕಬಳಿಸಲು ಮುಂದಾಗಿದ್ದಾರೆ. ಸಕ್ಕರೆ ಸಚಿವ ಶಿವಾನಂದ ಪಾಟೀಲರ ಹಗರಣ ಶೀಘ್ರವೇ ಬಯಲಿಗೆ ಬರಲಿದೆ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.