ಬೆಂಗಳೂರು/ಚಿಕ್ಕಮಗಳೂರು: ತಾಕತ್ತಿದ್ರೆ ಶ್ರೀರಾಮಸೇನೆ ಬ್ಯಾನ್ ಮಾಡ್ಲಿ. ಅದರ ಪರಿಣಾಮ ಎದುರಿಸಬೇಕಾಗುತ್ತೆ ಅಂತ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಂಘಟನೆಗಳಾದ ಪಿಎಫ್‍ಐ, ಕೆಎಫ್‍ಡಿ ದೇಶದ್ರೋಹಿ ಸಂಘಟನೆಗಳು. ಅವನ್ನ ಬ್ಯಾನ್ ಮಾಡಲಿ. ಹಿಂದು ಸಂಘಟನೆಗಳು ದೇಶ ದ್ರೋಹಿ ಸಂಘಟನೆಗಳಲ್ಲ. ಸರ್ಕಾರಕ್ಕೆ ತಾಕತ್ತಿದ್ರೆ ಶ್ರೀರಾಮ ಸೇನೆ ಬ್ಯಾನ್ ಮಾಡಲಿ. ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ ಅಂದ್ರು.
ಎರಡು ರಾಷ್ಟ್ರೀಯ ಪಕ್ಷಗಳು ನಿರ್ಲಜ್ಜ ಪಕ್ಷಗಳು. ಸಾವಿನಲ್ಲಿ ರಾಜಕಾರಣ ಮಾಡುತ್ತಿವೆ. ಬಿಜೆಪಿಯವರದು ದ್ವಿಮುಖ ನೀತಿ. ಅಧಿಕಾರ ಇದ್ದಾಗ ಒಂದು, ಇಲ್ಲದಾಗ ಒಂದು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಪಿಎಫ್‍ಐ ಸಂಘಟನೆಯನ್ನ ಯಾಕೆ ಬ್ಯಾನ್ ಮಾಡಲಿಲ್ಲ. ಗೃಹ ಸಚಿವ ಅಶೋಕ್ ಗೆ ಸ್ವತಃ ನಾನೇ ಹೇಳಿದ್ದೆ. ಆದರೆ ಇವಾಗ ನಾಟಕ ಮಾಡೋಕೆ ನಾಚಿಕೆ ಆಗಲ್ವ ಅಂತ ವಾಗ್ದಾಳಿ ನಡೆಸಿದ್ರು.
ಸಂಘಟನೆಗಳ ನಡುವೆ ಗಲಾಟೆ ನಿಲ್ಲಿಸಬೇಕು. ಪೇಜಾವರ ಶ್ರೀಗಳು, ವೀರೇಂದ್ರ ಹೆಗ್ಗಡೆ ಬಳಿ ನಾನು ಮಾತನಾಡುತ್ತೇನೆ. ಮುಲ್ಲಾ ಮೌಲ್ವಿಗಳು ಜೊತೆ ಸೇರಿ ಶಾಂತಿ ಸಂಧಾನ ಸಭೆ ನಡೆಸಲು ಕೇಳಿಕೊಳ್ಳುತ್ತೇನೆ. ಬಿಜೆಪಿ ಹಿಂದೂ ಸಂಘಟನೆಗಳ ತಲೆ ಮೇಲೆ ಕಾಲಿಟ್ಟು ರಾಜಕೀಯ ಮಾಡುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೇ ನನ್ನ ವಿರುದ್ಧ 13 ಕೇಸು ಹಾಕಿದ್ರು. ಶ್ರೀರಾಮ ಸೇನೆ ಬ್ಯಾನ್‍ಗೆ ಮುಂದಾದ್ರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತೆ ಅಂತ ಹೇಳಿದ್ರು.
ಕೋಮುಭಾವನೆ ಕೆರಳಿಸುವ ಸಂಘಟನೆಗಳ ವಿರುದ್ಧ ಕ್ರಮ ಎಂದ ಸಿಎಂ: ಕೋಮುಭಾವನೆ ಕೆರಳಿಸುವಂತಹಾ ಎಲ್ಲಾ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಆ ಸಂಘಟನೆ ಯಾವುದೇ ಧರ್ಮಕ್ಕೆ ಸೇರಿರಲಿ. ಆ ಸಂಘಟನೆಗಳು ಪಿಎಫ್‍ಐ, ಬಜರಂಗದಳ, ಶ್ರೀರಾಮಸೇನೆ ಯಾವುದೇ ಆಗಿರಬಹುದು ಎಲ್ಲದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರೂ ಸಾಯಬಾರದು. ಎಲ್ಲರ ಜೀವವೂ ಅಮೂಲ್ಯವಾದದ್ದು. ಸತ್ತವರ ಕುಟುಂಬದ ಬಗ್ಗೆ ನಮಗೆ ಸಿಂಪಥಿ ಇದೆ. ಅವರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಸಿಗಲಿದೆ ಎಂದ್ರು.
ಆದ್ರೆ ಈ ಬಿಜೆಪಿಯವ್ರು ಅಲ್ಲಿಗೆ ಹೋಗಿ ಗಲಾಟೆ ಮಾಡುತ್ತಿದ್ದಾರೆ. ಅವರಿಗೆ ಗಲಾಟೆ ಮಾಡಲು ಹೇಳಿದ್ದು ಯಾರು? ಅವರೇನು ಹಿಂದುತ್ವವನ್ನ ಗುತ್ತಿಗೆ ಪಡೆದಿದ್ದಾರಾ? ನಾವೆಲ್ಲಾ ಹಿಂದುಗಳಲ್ವಾ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಕೂಲಂಕುಶವಾಗಿ ಪರಿಶೀಲಿಸಿ ಅವುಗಳನ್ನ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ ಎಂದ್ರು.