ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ರಾಜೀನಾಮೆ ನೀಡಲಿ – ಸಿಟಿ ರವಿ

Public TV
2 Min Read
HDK C T Ravi

– ಲೋಕಸಭೆ ಫಲಿತಾಂಶದಿಂದ ಸಿಎಂ ಪಾಠ ಕಲಿತಿಲ್ಲ
– ಅನುದಾನ ಹಂಚಿಕೆಯಲ್ಲಿ ತಾರತಮ್ಯ ಬೇಡ

ಬೆಂಗಳೂರು: ನೀವು ಹತಾಶರಾಗಿ ಈ ರೀತಿ ವರ್ತನೆ ಮಾಡುತ್ತಿರುವಿರಿ. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ನಿಮ್ಮ ಹಾಗೂ ರಾಜ್ಯದ ಆರೋಗ್ಯ ದೃಷ್ಟಿಯಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಬಿಜೆಪಿ ಶಾಸಕ ಸಿಟಿ ರವಿ ಹೇಳಿದ್ದಾರೆ.

ಪ್ರತಿಭಟನಾಕಾರರ ಮೇಲೆ ಆಕ್ರೋಷ ವ್ಯಕ್ತಪಡಿಸಿದ ವಿಚಾರವಾಗಿ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಲೋಕಸಭೆ ಫಲಿತಾಂಶದಿಂದ ಸಿಎಂ ಪಾಠ ಕಲಿತಿಲ್ಲ. ಸಿಂಗಲ್ ನಂಬರ್ ಕೂಡ ಅವರಿಗೆ ಬೇಕಾಗಿಲ್ಲ ಅಂತ ಅನ್ನಿಸುತ್ತದೆ. ಹೀಗಾಗಿ ಸಿಎಂ ಹೀಗೆಲ್ಲ ಮಾತಾಡಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ತಮ್ಮ ಮಗನಿಗೆ ರಾಜೀನಾಮೆ ನೀಡುವ ಸಲಹೆ ನೀಡಲಿ. ಈ ಮೂಲಕ ಸಿಎಂ ರಾಜ್ಯದ ಜನರ ಹಿತ ಕಾಪಾಡಲಿ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದ ಮುಖ್ಯಮಂತ್ರಿ ನೀವಾ, ಇಲ್ಲ ಮೋದಿನಾ? – ಸಿಎಂಗೆ ಪ್ರಶ್ನೆ

HDD NIKHIL 1

ಸಿಎಂ ಅವರಿಗೆ ಅಧಿಕಾರಲ್ಲಿ ಮುಂದುವರೆಯುವ ಯೋಗ್ಯತೆ, ಅರ್ಹತೆ ಏನಿದೆ? ಈ ಬಗ್ಗೆ ರಾಜ್ಯದ ಜನರಿಗೆ ಉತ್ತರ ಕೊಡಲಿ. ಇದು ಕರ್ನಾಟಕ ಸರ್ಕಾರ. ಬಿಜೆಪಿ, ಜೆಡಿಎಸ್ ಸರ್ಕಾರ ಅಂತ ಇರುವುದಿಲ್ಲ. ಸಂವಿಧಾನದತ್ತವಾಗಿ ಸಿಎಂ ಅಧಿಕಾರ ನಿಮಗೆ ನೀಡಲಾಗಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಬೇಡಿ ಎಂದು ಕಿಡಿಕಾರಿದರು.

ಸಿಎಂ ಇಂದು ಸಣ್ಣತನದ ಮಾತುಗಳನ್ನು ಆಡಿದ್ದಾರೆ. ಶಾಸಕ ಶಿವನಗೌಡ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿರುವ ಹಿನ್ನೆಲೆ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಅವರ ಬಗ್ಗೆಯೂ ಸಿಎಂ ಏಕವಚನದಲ್ಲಿ ಮಾತಾಡಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿಯೋ ಅಥವಾ ಜೆಡಿಎಸ್ ಮುಖ್ಯಮಂತ್ರಿಯೋ? ಸಂವಿಧಾನದ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಾರಾ? ಅಥವಾ ಜೆಡಿಎಸ್ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದಾರಾ ಎಂದು ಪ್ರಶ್ನಿಸಿದರು.

C T Ravi

ಹೋರಾಟಗಾರರು ನಿಮ್ಮ ತಂದೆಯ ಆಸ್ತಿ ಕೇಳಿಲ್ಲ. ರಾಜ್ಯದ ಮುಖ್ಯಮಂತ್ರಿ ಆಗಲು ನಿಮಗೆ ಯೋಗ್ಯತೆ ಇಲ್ಲ. ನೀವು ಜೆಡಿಎಸ್ ಮುಖ್ಯಮಂತ್ರಿಗಳಾಗಿದ್ದರೆ ನಿಮಗೆ ನೀಡುತ್ತಿರುವ ಸೌಲಭ್ಯಗಳನ್ನು ರಾಜ್ಯಪಾಲರು ವಾಪಸ್ ಪಡೆಯಲಿ. ನಿಮ್ಮ ಮಾತು ಅಸಂವಿಧಾನಿಕ ಮಾತು. ಜನರನ್ನ ಕೆರಳಿಸುವ ಮಾತುಗಳನ್ನು ಆಡುತ್ತಿರುವಿರಿ ಎಂದು ಸಿಎಂ ವಿರುದ್ಧ ಗುಡುಗಿದರು.

ಎಚ್‍ಆರ್ ಬಿಆರ್ ಲೇಔಟ್‍ನಲ್ಲಿ 2006ರಂದು ಬಿಡಿಎ ನಿಂದ ನಿವೇಶನ ಪಡೆದಿದ್ದೆ. ಆದರೆ ಈಗ ಅದನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಬಳಿಕ ಬದಲಿ ನಿವೇಶನಕ್ಕೆ ಮನವಿ ಸಲ್ಲಿಸಿದ್ದೆ. ಆದರೆ ಇಲ್ಲಿಯವರೆಗೂ ನಿವೇಶನ ನೀಡಿಲ್ಲ. ಒಂದು ವಾರದಲ್ಲಿ ಬದಲಿ ನಿವೇಶನ ಕೊಡಿ, ಇಲ್ಲವೇ ನನ್ನ ಹಳೆಯ ನಿವೇಶನ ಕೊಡಿ. ಒಂದು ವೇಳೆ ನೀವು ನಿವೇಶನ ನೀಡದಿದ್ದರೆ ಬಿಡಿಎ ಮುಂದೆ ಧರಣಿ ಮಾಡುತ್ತೇನೆ ಎಂದು ಶಾಸಕರು ಎಚ್ಚರಿಕೆ ಕೊಟ್ಟಿದ್ದಾರೆ.

ಬಿಡಿಎಯಲ್ಲಿ ದಂಧೆ ನಡೆಯುತ್ತಿದೆ. ಸಿಬ್ಬಂದಿ, ಅಧಿಕಾರಿಗಳು ಶ್ರೀಮಂತರಾಗುತ್ತಿದ್ದಾರೆ. ಬಿಡಿಎ ಮಾತ್ರ ಸಾಲದಲ್ಲಿ ಇದೆ. ಈ ದಂಧೆ ನಿಲ್ಲಿಸುವ ಅಧಿಕಾರಿಯೊಬ್ಬನ್ನು ನೇಮಕವಾಗಬೇಕಿದೆ ಎಂದು ಒತ್ತಾಯಿಸಿದರು.

Share This Article
Leave a Comment

Leave a Reply

Your email address will not be published. Required fields are marked *