ಬಾಲಕನನ್ನ ಬಲಿ ಪಡೆದಿದ್ದ ನರ ಭಕ್ಷಕ ಚಿರತೆಯ ಚಲನವಲನ ಕ್ಯಾಮೆರಾದಲ್ಲಿ ಸೆರೆ

Public TV
2 Min Read
tmk cheetah

ತುಮಕೂರು: ಗುಬ್ಬಿ ತಾಲೂಕಿನ ಮಣ್ಣಿಕುಪ್ಪೆ ಗ್ರಾಮದಲ್ಲಿ ಬಾಲಕನನ್ನ ಬಲಿ ಪಡೆದಿದ್ದ ನರ ಭಕ್ಷಕ ಚಿರತೆಗಳ ಚಲನವಲನ ಅರಣ್ಯ ಇಲಾಖೆ ಇರಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತುಮಕೂರಿನ ಬನ್ನಿಕುಪ್ಪೆ-ಕುಣಿಗಲ್ ದೊಡ್ಡ ಮಳಲವಾಡಿ ಅರಣ್ಯ ಪ್ರದೇಶದಲ್ಲಿ ಇರಿಸಿದ್ದ ಕ್ಯಾಮೆರಾದಲ್ಲಿ ಚಿರತೆಗಳ ಚಲನವಲನ ಸೆರೆಯಾಗಿದೆ. ಒಟ್ಟು ಮೂರು ವಿಭಾಗದಿಂದ ನಾಲ್ಕು ಚಿರತೆಯ ಚಿತ್ರ ದೊರೆತಿದ್ದು, ಒಂದು ಹೆಣ್ಣು, ಒಂದು ಗಂಡು ಎರಡು ಮದ್ಯ ವಯಸ್ಸಿನ ಚಿರತೆ ಎಂದು ಪತ್ತೆಹಚ್ಚಲಾಗಿದೆ. ಕಳೆದ ರಾತ್ರಿಯಿಂದ ಮುಂಜಾನೆಯವರೆಗೂ ಚಿರತೆಯ ಚಲನವಲನ ಸೆರೆಯಾಗಿದೆ.

tmk cheetah 1

ಈ ನಡುವೆ ಮೂರನೇ ದಿನವಾದ ಇಂದು ಅರಣ್ಯ ಇಲಾಖೆ ಕೂಂಬಿಂಗ್ ಮುಂದುವರಿಸಿದೆ. ಗುಬ್ಬಿ ತಾಲೂಕಿನ ಮಣ್ಣಿಕುಪ್ಪೆ, ಸಿಎಸ್ಪುರ, ಮಾವಿನಹಳ್ಳಿ, ಹೆಬ್ಬೂರು ಹೋಬಳಿಗಳ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಂಕರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ನೇತೃತ್ವದಲ್ಲಿ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈ ಪ್ರದೇಶಗಳಲ್ಲಿ 20 ಬೋನ್‍ಗಳನ್ನ ಇಟ್ಟು ನರಭಕ್ಷಕ ಚಿರತೆಗಳಿಗೆ ಖೆಡ್ಡಾ ತೋಡಿದ್ದಾರೆ.

tmk cheetah 2

ನಡೆದಿದ್ದು ಏನು?

ಗುರುವಾರ ಸಂಜೆ ನರಭಕ್ಷಕ ಚಿರತೆ 5 ವರ್ಷದ ಬಾಲಕನನ್ನು ಗುಬ್ಬಿ ತಾಲೂಕು ಮಣಿಕುಪ್ಪೆಯಲ್ಲಿ ಬಲಿ ತಗೆದುಕೊಂಡಿತ್ತು. ದನ ಮೇಯಿಸಲು ಹೊಲಕ್ಕೆ ತೆರಳಿದ್ದ ತಂದೆ ಶಿವಕುಮಾರ್, ತಾಯಿ ಪುಷ್ಪಲತಾ ಜತೆ ಹಠವಿಡಿದು ಬಾಲಕ ಸಮರ್ಥ ಗೌಡ(5) ಕೂಡ ತೆರಳಿದ್ದನು. ಅಲ್ಲೇ ಪಕ್ಕದಲ್ಲಿ ಆಟವಾಡುವಾಗ ಕಿರಾತಕ ಚಿರತೆ ಏಕಾಏಕಿ ದಾಳಿ ನಡೆಸಿ ಬಾಲಕನ ರಕ್ತಹೀರಿತ್ತು.

ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಸಮರ್ಥ್ ಗೌಡನ ಕುತ್ತಿಗೆಗೆ ಬಾಯಿಹಾಕಿ ರಕ್ತ ಹೀರುವ ಸಂದರ್ಭದಲ್ಲಿ ಅಪ್ಪ, ಅಮ್ಮ ಎಂದು ಕಣ್ಣೀರಿಟ್ಟಿದ್ದರು. ತಮ್ಮ ಕಣ್ಣೆದುರೇ ಇದ್ದ ಒಬ್ಬನೇ ಮಗ ಚಿರತೆಗೆ ಆಹಾರವಾಗುತ್ತಿದ್ದನ್ನು ಕಂಡು ಚೀರಾಡಿ ಸಹಾಯಕ್ಕೆ ಧಾವಿಸುವಷ್ಟರಲ್ಲಿ ಚಿರತೆ ಅರಣ್ಯದ ಒಳಗಡೆ ಜಿಗಿದು ಕಣ್ಮರೆಯಾಗಿತ್ತು.

tmk cheetah 3

ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪುಟಾಣಿ ಬಾಲಕನ ಶವ ಕಂಡು ಸ್ಥಳೀಯರು ಮರುಗಿದ್ದರು. ಚಿರತೆ ಹಿಡಿಯಲಾಗದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಇದೇ ಚಿರತೆ ಹೆಬ್ಬೂರು ಹೋಬಳಿ ಬನ್ನಿಕುಪ್ಪೆ ಲಕ್ಷ್ಮಮ್ಮ, ಕುಣಿಗಲ್ ತಾಲೂಕು ದೊಡ್ಡಮರಳವಾಡಿ ಆನಂದಯ್ಯ ಎಂಬುವವರನ್ನು ತಿಂದು ಮುಗಿಸಿದ ಘಟನೆ ಹಸಿರಾಗಿರುವಾಗಲೇ ಈಗ ಮತ್ತೊಂದು ಭಯಾನಕ ಘಟನೆ ನಡೆದಿತ್ತು.

ದನ ಕಾಯಲು ತೆರಳುವಾಗ ನಾನು ಬರುತ್ತೇನೆ ಎಂದು ಹಠವಿಡಿದು ಬಂದ ಮುದ್ದು ಕಂದ ಸಮರ್ಥ್ ಗೌಡನನ್ನು ಆತನ ತಾಯಿ ಪುಷ್ಪಲತಾ ಎಚ್ಚರಿಕೆಯಿಂದಲೇ ಎತ್ತಿಕೊಂಡು ಜೋಪಾನ ಮಾಡಿದ್ದರು. ಪೊದೆಯಲ್ಲಿ ಚಿರತೆಯಿರುವುದನ್ನು ಗ್ರಹಿಸಿ ಬೆಚ್ಚಿ ಓಡಿಹೋದ ಹಸುಗಳನ್ನು ನೋಡಲು ಮಗು ಕೆಳಗಿಳಿಸಿ ಸ್ವಲ್ಪ ದೂರ ಹೋಗಿದ್ದೇ ತಡ ನರ ಭಕ್ಷಕ ಚಿರತೆ ಪುಟಾಣಿ ಕಂದನ ರಕ್ತ ಹೀರಿತ್ತು. ಅಪಾಯ ಅರಿತು ಕೆಲವೇ ನಿಮಿಷದಲ್ಲಿ ತಾಯಿ ವಾಪಸಾದರೂ ಕಾಲ ಮಿಂಚಿ ಹೋಗಿತ್ತು.

Share This Article