ಬಾವಿಗೆ ಬಿದ್ದ ಚಿರತೆ, ಮಂಚದ ಮೂಲಕ ರಕ್ಷಣೆ- ವಿಡಿಯೋ ವೈರಲ್

Public TV
1 Min Read
LEOPARD

ಭೋಪಾಲ್: ಚಿರತೆಯೊಂದು ಬಾವಿಗೆ ಬಿದ್ದು ಪರದಾಡಿದ್ದು, ಹರಸಾಹಸಪಟ್ಟು ರಕ್ಷಣೆ ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಧ್ಯಪ್ರದೇಶದಲ್ಲಿ ಘಟನೆ ನಡೆದಿದ್ದು, ಚಿರತೆಯ ರಕ್ಷಣೆಯ ವಿಡಿಯೋವನ್ನು ಅರಣ್ಯಾಧಿಕಾರಿ(ಐಎಫ್‍ಎಸ್) ಪ್ರವೀಣ್ ಕಾಸ್ವನ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಶಿವಪುರಿಯಲ್ಲಿ ಈ ಚಿರತೆ ಆಕಸ್ಮಿಕವಾಗಿ ಆಳದ ಬಾವಿಗೆ ಬಿದ್ದಿತ್ತು. ಸಮಯಕ್ಕೆ ಸರಿಯಾಗಿ ಇದನ್ನು ರಕ್ಷಿಸಲಾಗಿದ್ದು, ಈ ಕಾರ್ಯಾಚರಣೆ ಅದ್ಭುತವಾಗಿದೆ ಎಂದು ಕಾರ್ಯಾಚರಣೆಯ ಚತುರತೆಯನ್ನು ಶ್ಲಾಘಿಸಿದ್ದಾರೆ.

ಈ ವಿಡಿಯೋ ಒಂದು ನಿಮಿಷದ್ದಾಗಿದ್ದು, ನೀರು ಇರುವ ಬಾವಿಗೆ ಬಿದ್ದಿದ್ದ ಚಿರತೆಯನ್ನು ಮಂಚದ ಮೂಲಕ ಮೇಲೆತ್ತಲಾಗಿದೆ. ಮಂಚವನ್ನು ಉಲ್ಟಾ ಮಾಡಿ ಅದಕ್ಕೆ ಹಗ್ಗ ಕಟ್ಟಿ ಎಳೆ ಬಿಟ್ಟು, ಚಿರತೆ ಅದರ ಮೇಲೆ ಕುಳಿತ ನಂತರ ಮೇಲೆತ್ತುವ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಮಂಚದ ಮೇಲೆ ಚಿರತೆ ಕುಳಿತಿರುವ ವಿಡಿಯೋ ವೈರಲ್ ಆಗಿದೆ.

ಚಿರತೆ ಬಾವಿಯಿಂದ ಹೊರಬರುತ್ತಿದ್ದಂತೆ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದವರು ಭಯಭೀತರಾಗಿ ಓಡಲು ಪ್ರಾರಂಬಿಸುತ್ತಾರೆ. ನಂತರ ಚಿರತೆ ಸಹ ಓಡಿ ಹೋಗಿದೆ.

ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ನಲ್ಲಿ ಈ ಕುರಿತು ಬರೆದುಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ರಕ್ಷಿಸುತ್ತಿರುವವರೊಂದಿಗೆ ಚಿರತೆ ಸಹಕರಿಸಿದೆ. ಹಲವು ಬಾರಿ ಚಿರತೆಗಳು ರಕ್ಷಣಾ ಕಾರ್ಯಾಚರಣೆ ನಡೆಸದವರ ಮೇಲೆಯೇ ದಾಳಿ ನಡೆಸುತ್ತವೆ. ಆದರೆ ಈ ಚಿರತೆ ಅವರೊಂದಿಗೆ ಸಹಕರಿಸಿದೆ. ಈ ವಿಡಿಯೋವನ್ನು ಐಎಫ್‍ಎಸ್ ಅಧಿಕಾರಿ ರವೀಂದ್ರ ಮಣಿ ತ್ರಿಪಾಠಿಯವರು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಮಾ.16ರಂದು ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಕೇವಲ 3 ಗಂಟೆಗಳಲ್ಲಿ 20 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. 2 ಸಾವಿರಕ್ಕೂ ಅಧಿಕ ಲೈಕ್ಸ್ ಪಡೆದಿದೆ. ಈ ಮೂಲಕ ರಕ್ಷಣಾ ಕಾರ್ಯಾಚರಣೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಹಲವರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ, ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *