ಚಿಕ್ಕಮಗಳೂರು: ಒಂದೇ ವಾರದಲ್ಲಿ ಮೂರು ಕಡೆ ಇಟ್ಟಿದ್ದ ಬೋನಿಗೆ ಬೀಳದ ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಟಕ್ಕರ್ ಕೊಟ್ಟುಕೊಂಡು ಓಡಾಡುತ್ತಿತ್ತು. ಆದರೆ ನಾಲ್ಕನೇ ಜಾಗದಲ್ಲಿ ಇಟ್ಟ ಬೋನಿನಲ್ಲಿ ಚಿರತೆ ಸೆರೆಯಾಗಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಕಾವಲು ಚೌಡೇಶ್ವರಿ ದೇವಸ್ಥಾನದ ಬಳಿ ನಡೆದಿದೆ.
ಬೀರೂರಿನ ಸುತ್ತಮುತ್ತಲಿನ ಬ್ಯಾಗಡೇಹಳ್ಳಿ, ಹುಲ್ಲೇಹಳ್ಳಿ, ಜೋಗಿಹಟ್ಟಿ, ಸೀಗೆಹಡ್ಲು, ದಾಸರಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಯ ಜನರಿಗೆ ಈ ಚಿರತೆ ತಲೆನೋವು ತರಿಸಿತ್ತು. ಕಳೆದೊಂದು ತಿಂಗಳಿಂದ ಊರಿನ ಜನರ ಕಣ್ಣಿಗೆ ಬಿದ್ದು ಮಾಯವಾಗುತ್ತಿತ್ತು. ಇದರಿಂದ ಹಳ್ಳಿಯ ಜನ ಹೊಲಗದ್ದೆಗಳಿಗೆ ತೋಟಕ್ಕೆ ಹೋಗಲು ಭಯ ಪಡುತ್ತಿದ್ದರು. ಹಳ್ಳಿಯಲ್ಲಿ ನಾಯಿ-ಕುರಿಗಳನ್ನ ಹೊತ್ತೊಯ್ದು ಒಂದೆರಡು ದಿನ ಕಾಣಿಸಿಕೊಳ್ಳುತ್ತಿರಲಿಲ್ಲ. ಆಮೇಲೆ ಅಲ್ಲಲ್ಲೇ ಮತ್ತೆ ಪ್ರತ್ಯಕ್ಷವಾಗುತ್ತಿತ್ತು. ಕೆಲ ಹಳ್ಳಿಗಳಲ್ಲಿ ಜಾನುವಾರುಗಳನ್ನೂ ಬೇಟೆಯಾಡಿತ್ತು. ಇದರಿಂದ ಭಯಗೊಂಡು ಹಳ್ಳಿಗರು ಅರಣ್ಯ ಇಲಾಖೆಗೆ ಚಿರತೆಯನ್ನ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು.
ಅರಣ್ಯ ಇಲಾಖೆ ಸಿಬ್ಬಂದಿ ಒಂದೇ ವಾರದಲ್ಲಿ ಮೂರು ಕಡೆ ಬೋನಿಟ್ಟರು ಕೂಡ ಚಿರತೆ ಸೆರೆಯಾಗಿರಲಿಲ್ಲ. ಕಡೆಯದಾಗಿ ಬೀರೂರಿನ ಕಾವಲು ಚೌಡೇಶ್ವರಿ ದೇವಾಲಯದ ಬಳಿ ಅರಣ್ಯ ಇಲಾಖೆ ನಾಲ್ಕನೇ ಬಾರಿ ಇಟ್ಟ ಬೋನಿಗೆ ಚಿರತೆ ಸೆರೆಯಾಗಿದೆ. ಸುಮಾರು 12-14 ವರ್ಷದ ಚಿರತೆ ಪ್ರಾಯದ ಚಿರತೆಯಾಗಿದೆ. ಸೆರೆ ಹಿಡಿದ ಚಿರತೆಯನ್ನ ಬನ್ನೇರುಘಟ್ಟಕ್ಕೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಾದ ಸಂತೋಷ್ ಕುಮಾರ್ ಹಾಗೂ ಹರೀಶ್ ಪಾಲ್ಗೊಂಡಿದ್ದರು. ಕಳೆದೊಂದು ತಿಂಗಳಿಂದ ಹತ್ತಾರು ಹಳ್ಳಿಗರಿಗೆ ಭಯ ಹುಟ್ಟಿಸಿದ ಚಿರತೆ ಸೆರೆಯಾಗಿದ್ದರಿಂದ ಹಳ್ಳಿಗರು ನಿಟ್ಟುಸಿರು ಬಿಟ್ಟಿದ್ದಾರೆ.