ಬೆಂಗಳೂರು/ಎಲೆಕ್ಟ್ರಾನಿಕ್ ಸಿಟಿ: ಸಿಲಿಕಾನ್ ಸಿಟಿ ಬೆಂಗಳೂರು (Bengaluru) ಹೊರವಲಯದ ಜನರಿಗೆ ಚಿರತೆ ಕಾಟ ಸದ್ಯಕ್ಕೆ ತಪ್ಪುವಂತೆ ಕಾಣುತ್ತಿಲ್ಲ. ಪದೇ ಪದೇ ಚಿರತೆ ಒಂದಿಲ್ಲೊಂದು ಕಡೆ ಕಾಣಿಸಿಕೊಳ್ಳುತ್ತಿದ್ದು, ಜನರ ನಿದ್ದೆಗೆಡಿಸಿದೆ. ಆದರೆ ಈ ಬಾರಿ ಚಿರತೆ ನೇರ ಐಟಿಬಿಟಿ ಹಬ್‌ಗೆ ಎಂಟ್ರಿ ಕೊಟ್ಟಿದ್ದು, ಐಟಿಸಿಟಿ ಮಂದಿಯನ್ನ ಬೆಚ್ಚಿ ಬೀಳಿಸಿದೆ.
ನಸುಕಿನ ಜಾವ ಮೂರು ಗಂಟೆ ಸಮಯದಲ್ಲಿ ಹೆದ್ದಾರಿಯಲ್ಲಿ ವಾಹನಗಳ ಓಡಾಟದ ಸಂಖ್ಯೆ ಕಡಿಮೆ ಇತ್ತು. ಈ ವೇಳೆ ರಸ್ತೆ ದಾಟಿ ಚಿರತೆ ಹೋಗುತ್ತಿರುವ ದೃಶ್ಯವನ್ನ ಕಂಡು ಅಲ್ಲಿನ ಜನರು ಬೆಚ್ಚಿ ಬಿದ್ದಿದ್ದಾರೆ. ಸಿಲಿಕಾನ್ ಸಿಟಿ ಬೆಂಗಳೂರಿನ ಐಟಿಬಿಟಿ ಹಬ್ ಎಂದೇ ಖ್ಯಾತಿಗಳಿಸಿರುವ ಎಲೆಕ್ಟ್ರಾನಿಕ್ ಸಿಟಿ (Electronic City) ಮೊದಲನೇ ಹಂತದ ಟೋಲ್ ಗೇಟ್ ಬಳಿ ಚಿರತೆಯೊಂದು (Leopard) ರಸ್ತೆ ದಾಟಿ ಹೋಗಿದೆ. ನಸುಕಿನ ಜಾವ ಮೂರು ಗಂಟೆ ಸಮಯದಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಪನಕ್ ಇಂಡಿಯಾ ಕಂಪನಿ ಭಾಗದಿಂದ ಎನ್‌ಟಿಟಿಎಫ್ ಗ್ರೌಂಡ್ ಭಾಗಕ್ಕೆ ಹೋಗಿದೆ. ಟೋಲ್ ಪ್ಲಾಜಾನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸಿಸಿಟಿವಿ ಕಡೆ ಕಣ್ಣಾಡಿಸಿದಾಗ ಚಿರತೆ ಓಡಾಡಿರೋ ದೃಶ್ಯ ಕಂಡು ಶಾಕ್ ಆಗಿದ್ದಾರೆ. ಇದನ್ನೂ ಓದಿ: ಬ್ರಿಟಿಷರಂತೆ ಕಾಂಗ್ರೆಸ್ – ಸಿಜೆಐ ನಿವಾಸದಲ್ಲಿ ಗಣೇಶ ಪೂಜೆಗೆ ಹೋಗಿದ್ದನ್ನು ಟೀಕಿಸಿದವರಿಗೆ ಮೋದಿ ತಿರುಗೇಟು
ಇನ್ನೂ ಇಷ್ಟು ದಿನಗಳ ಕಾಲ ಚಿರತೆ ಆನೇಕಲ್ ಭಾಗದ ಜಿಗಣಿ, ಕ್ಯಾಲಸನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಅರಣ್ಯ ಇಲಾಖೆಯು ಸಹ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಇದೀಗ ಎಲೆಕ್ಟ್ರಾನಿಕ್ ಸಿಟಿಯಂತಹ ಸಾವಿರಾರು ಐಟಿಬಿಟಿ ಕಂಪನಿಗಳಿರುವ ಪ್ರದೇಶದಲ್ಲಿ ಲಕ್ಷಾಂತರ ಮಂದಿ ಕೆಲಸ ಮಾಡುತ್ತಾರೆ. ಇಂತಹ ಜಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಐಟಿಸಿಟಿ ಮಂದಿಯನ್ನ ಆತಂಕಕ್ಕೀಡಾಗುವಂತೆ ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಕೆಆರ್‌ಪುರಂ ಜೋನ್ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯವಿದ್ದಲ್ಲಿ ಬೋನ್ ಇಟ್ಟು ಚಿರತೆಯನ್ನು ಸೆರೆಹಿಡಿಯುವ ಪ್ಲಾನ್ ಮಾಡಿದ್ದಾರೆ. ಇದನ್ನೂ ಓದಿ: ಡಿಸಿಇಟಿ ಕ್ಯಾಶುಯಲ್ ಸುತ್ತು ಆರಂಭ-ಕೆಇಎ