ವಿಡಿಯೋ: ವಸತಿ ಕಾಲೋನಿಗೆ ನುಗ್ಗಿದ ಚಿರತೆ- ಸೆರೆಹಿಡಿಯುವಾಗ ಅರಣ್ಯಾಧಿಕಾರಿ ಮೇಲೆ ದಾಳಿ!

Public TV
1 Min Read
leopard final

ಇಂದೋರ್: ಚಿರತೆಯೊಂದು ಜನನಿವಾಸಿ ಪ್ರದೇಶಕ್ಕೆ ಬಂದು ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಇಂದೋರ್‍ನಲ್ಲಿ ಶುಕ್ರವಾರದಂದು ನಡೆದಿದೆ.

ಇಲ್ಲಿನ ಪಲ್ಹಾರ್ ನಗರ ಪ್ರದೇಶಕ್ಕೆ ಶುಕ್ರವಾರ ಬೆಳಗ್ಗೆ ಚಿರತೆ ಲಗ್ಗೆ ಇಟ್ಟಿತ್ತು. ನಿರ್ಮಾಣ ಹಂತದ ಕಟ್ಟವೊಂದಕ್ಕೆ ಹಾಗೂ ಮನೆಯೊಳಗೆ ಚಿರತೆ ನುಗ್ಗುವುದು ಕಂಡುಬಂದಿತ್ತು. ಚಿರತೆ ಮೂವರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ್ದು, ಕೊನೆಗೂ ಅರಣ್ಯಾಧಿಕಾರಿಗಳು ಚಿರತೆಯನ್ನ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆ ವೇಳೆ ಚಿರತೆ ಅರಣ್ಯಾಧಿಕಾರಿ ಮೇಲೆ ದಾಳಿ ಮಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

leopard 2

ಸುಮಾರು 8 ವರ್ಷ ವಯಸ್ಸಿನ ಚಿರತೆ ಹತ್ತಿರದ ಅರಣ್ಯಪ್ರದೇಶದಿಂದ ಬಂದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿತ್ತು. ಚಿರತೆಯನ್ನ ಸೆರೆಹಿಡಿಯುವ ವೇಳೆ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ನ ನೌಕರರೊಬ್ಬರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ ಎಂದು ಕಮಲಾ ನೆಹರೂ ಮೃಗಾಲಯದ ಉಸ್ತುವಾರಿ ಉತ್ತಮ್ ಯಾದವ್ ಹೇಳಿದ್ದಾರೆ.

leopard 1

ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಚಿರತೆಯನ್ನ ಸ್ಥಳೀಯರು ನೋಡಿದ್ದರು. ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಮೊದಲಿಗೆ ನಿರ್ಮಾಣ ಹಂತದ ಕಟ್ಟಡದೊಳಗೆ ಹೋಗಿದ್ದ ಚಿರತೆ ಬಳಿಕ ಮತ್ತೊಂದು ಮನೆಗೆ ನುಗ್ಗಿ 3 ಗಂಟೆಗಳವರೆಗೆ ಅಲ್ಲಿಯೇ ಇತ್ತು ಎಂದು ವರದಿಯಾಗಿದೆ.

ಅಂತಿಮವಾಗಿ ಅರವಳಿಕೆ ಮುದ್ದು ನೀಡಿ ಅರಣ್ಯಾಧಿಕಾರಿಗಳು ಚಿರತೆಯನ್ನ ಸೆರೆಹಿಡಿದಿದ್ದಾರೆ. ಮೊದಲನೇ ಅರವಳಿಕೆ ನೀಡಿದ ನಂತರ ಅರಣ್ಯಾಧಿಕಾರಿಯೊಬ್ಬರು ಚಿರತೆ ಬಳಿ ಹೋಗಿದ್ದು, ಈ ವೇಳೆ ಅವರ ಮೇಲೆ ದಾಳಿ ಮಾಡಿದೆ. ಸಿಬ್ಬಂದಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗಾಯಗೊಂಡಿದ್ದಾರೆ.

leopard

ನಂತರ ಎರಡನೇ ಬಾರಿಗೆ ಅರವಳಿಕೆ ಮದ್ದು ನೀಡಿ ಚಿರತೆ ಪ್ರಜ್ಞೆ ತಪ್ಪುವಂತೆ ಮಾಡಿದ್ದು, ಅರಣ್ಯಾಧಿಕಾರಿಗಳು ಸ್ಟೀಲ್ ಬೋನಿನಲ್ಲಿ ಚಿರತೆಯನ್ನ ಬಂಧಿಸಿದ್ದಾರೆ. ಅಗತ್ಯ ವೈದ್ಯಕೀಯ ಪರೀಕ್ಷೆಗಳು ನಡೆಸಿದ ಬಳಿಕ ಚಿರತೆಯನ್ನ ಕಾಡಿಗೆ ಬಿಡಲಾಗುತ್ತದೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *