– ಮನೆಯ ಶ್ವಾನ ಅಟ್ಟಾಡಿಸಿ ಹೋದ ಚಿರತೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಮನೆಗೆ ಆಹಾರ ಅರಸಿ ಬಂದ ಚಿರತೆಯೊಂದು ನುಗ್ಗಿದ್ದು, ಸಂಸದರ ಮನೆಯ ಸಾಕುನಾಯಿಯನ್ನು ಅಟ್ಟಿಸಿಕೊಂಡು ಹೋಗಿದೆ.
ಈ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಮವಾರ ಮಧ್ಯರಾತ್ರಿ ಶಿರಸಿ ತಾಲೂಕಿನ ಕಾಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಾಗೂ ಕುಟುಂಬ ಸದಸ್ಯರು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು. ಇದನ್ನೂ ಓದಿ: ಕೋಲಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಾರ್ಯಾಚರಣೆ – 8 ನಕಲಿ ಕ್ಲಿನಿಕ್ ಮೇಲೆ ದಾಳಿ
ಇದೇ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದ್ದು, ಮನೆಯ ಮುಂಭಾಗದಲ್ಲಿದ್ದ ಸಾಕುನಾಯಿಯನ್ನು ಅಟ್ಟಾಡಿಸಿಕೊಂಡು ಹೋಗಿದೆ. ಅದೃಷ್ಟವಶಾತ್ ಚಿರತೆ ದಾಳಿಯಿಂದ ಸಾಕು ನಾಯಿ ತಪ್ಪಿಸಿಕೊಂಡಿದೆ. ರಾತ್ರಿ ಮನೆಯ ನಾಯಿ ಹೆಚ್ಚು ಕೂಗಿದ್ದರಿಂದಾಗಿ, ಇಂದು ಬೆಳಗ್ಗೆ ಮನೆಯವರು ಸಿಸಿಟಿವಿ ದೃಶ್ಯ ವೀಕ್ಷಿಸಿದಾಗ ಚಿರತೆ ಮನೆಗೆ ಬಂದ ವಿಷಯ ತಿಳಿದಿದೆ.
ಘಟನೆ ಸಂಬಂಧ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಕಾರು ಅಪಘಾತದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಬೆನ್ನುಮೂಳೆ ಮುರಿತ – ಸಚಿವೆ ಆರೋಗ್ಯದ ಬಗ್ಗೆ ವೈದ್ಯರು ಹೇಳೋದೇನು?
ಸದ್ಯ ಚಿರತೆ ಇವರ ಮನೆಬಾಗಿಲಿಗೆ ಬಂದರೂ ಯಾವುದೇ ತೊಂದರೆಯಾಗಿಲ್ಲ. ಇನ್ನು ಈ ಭಾಗದಲ್ಲಿ ಚಿರತೆ ಓಡಾಟ ಸಾಮಾನ್ಯವಾಗಿದ್ದು, ಇತ್ತೀಚೆಗೆ ಅಹಾರ ಅರಸಿ ನಾಡಿನತ್ತ ಆಗಮಿಸುತಿದೆ. ಇದೇ ಮೊದಲ ಬಾರಿ ಕಾಗೇರಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ.