ಟಿ.ನರಸೀಪುರದಲ್ಲಿ ಕೊನೆಗೂ ಚಿರತೆ ಸೆರೆ – ಸ್ಥಳದಲ್ಲೇ ಕೊಂದುಹಾಕಿ ಅಂತಾ ಜನರ ಪಟ್ಟು

ಮೈಸೂರು: ತಿ.ನರಸೀಪುರ (T.Narasipura) ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ತೋಟದ ಸಮೀಪ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಕೊನೆಗೂ ಚಿರತೆ ಸೆರೆ ಸಿಕ್ಕಿದೆ. ಸೆರೆಯಾಗಿರುವುದು 6 ವರ್ಷ ವಯಸ್ಸಿನ ಗಂಡು ಚಿರತೆ ಎಂದು ತಿಳಿದುಬಂದಿದೆ.
ಗುರುವಾರ ಮುಂಜಾನೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ಬೋನಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಅದನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಕುತೂಹಲದಿಂದ ನೆರೆದಿದ್ದರು. ಇದನ್ನೂ ಓದಿ: ಚಿರತೆ ದಾಳಿಗೆ 11ರ ಬಾಲಕ ಬಲಿ
ತೋಟದಲ್ಲಿ ಸೆರೆ ಸಿಕ್ಕ ಚಿರತೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾದರು. ಆದರೆ ಇದಕ್ಕೆ ಗ್ರಾಮಸ್ಥರು ಅವಕಾಶ ನೀಡಲು ನಿರಾಕರಿಸಿದರು. ಚಿರತೆಯನ್ನು ಸ್ಥಳದಲ್ಲೇ ಕೊಲ್ಲುವಂತೆ ಜನರು ಪಟ್ಟು ಹಿಡಿದರು. ಇದರಿಂದಾಗಿ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
“ಬೋನಿಗೆ ಬಿದ್ದ ಚಿರತೆಯನ್ನು ಕೊಲ್ಲುವ ನಿಯಮ ಇಲ್ಲ. ಪರಿಸ್ಥಿತಿಯನ್ನು ಅರಿತು ಚಿರತೆ ಸ್ಥಳಾಂತರಕ್ಕೆ ಅನುವು ಮಾಡಿಕೊಡಿ” ಎಂದು ಅರಣ್ಯಾಧಿಕಾರಿಗಳು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ನಂತರ ಅಧಿಕಾರಿಗಳ ಮಾತಿಗೆ ಜನರು ಸಮ್ಮತಿ ಸೂಚಿಸಿ, ಸ್ಥಳಾಂತರಕ್ಕೆ ಅವಕಾಶ ಮಾಡಿಕೊಟ್ಟರು. ಇದನ್ನೂ ಓದಿ: ಮೈಸೂರಿನಲ್ಲಿ ಚಿರತೆ ದಾಳಿಗೆ 3ನೇ ಬಲಿ – ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನಾಕ್ರೋಶ
ಹೊರಳಹಳ್ಳಿ ಗ್ರಾಮದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಚಿರತೆ ದಾಳಿಗೆ ಬಾಲಕನೊಬ್ಬ ಬಲಿಯಾಗಿದ್ದ. ಇದಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದರು. ಆದರೆ ಈಗ ಸೆರೆ ಸಿಕ್ಕಿರುವ ಚಿರತೆ, ಬಾಲಕನನ್ನು ಕೊಂದಿದ್ದೇ ಎಂಬುದು ಖಚಿತವಾಗಿಲ್ಲ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k