ಚಾಮರಾಜನಗರ: ಹುಲಿ ಸೆರೆಗೆ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮದಲ್ಲಿ ನಡೆದಿದ್ದು, ಆದರೆ ರೈತರಿಗೆ ವ್ಯಾಘ್ರ ಭೀತಿಯಂತೂ ಮುಂದುವರೆದಿದೆ.
ಅರಕಲವಾಡಿ ಗ್ರಾಮದ ಉದಯ್ ಎಂಬವರ ಜಮೀನಿನಲ್ಲಿ ಹುಲಿ ಸೆರೆಗಾಗಿ ಕಳೆದ 15 ದಿನಗಳಿಂದ ಇಡುತ್ತಿದ್ದ ಬೋನಿಗೆ ಗಂಡು ಚಿರತೆಯೊಂದು ಬಿದ್ದಿದೆ. ಅರಕಲವಾಡಿ ಸುತ್ತಮುತ್ತಲಿನ ಮೇಲೂರು, ಚೌಡಹಳ್ಳಿ, ಎಲ್ಲೆ ಭಾಗದಲ್ಲಿ ಹುಲಿ ಓಡಾಡುತ್ತಿದ್ದು ಕೃಷಿ ಚಟುವಟಿಕೆ ನಡೆಸಲು ತೀವ್ರ ಭಯವಾಗುತ್ತಿದೆ ಎಂದು ರೈತರು ಕಳೆದ 6 ತಿಂಗಳಿನಿಂದ ಅಳಲು ತೋಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಾವುದೇ ಭೂಕಂಪನ ಆಗಿಲ್ಲ – ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಸ್ಪಷ್ಟನೆ
ಸುತ್ತಮುತ್ತಲೂ ಹತ್ತಾರು ಚಿರತೆಗಳಿವೆ, ಚಿರತೆಗಳನ್ನು ಸೆರೆ ಹಿಡಿಯಿರಿ ಎಂದು ನಾವು ಹೇಳುತ್ತಿಲ್ಲ, ವಾರಕ್ಕೊಮ್ಮೆ-15 ದಿನಕ್ಕೊಮ್ಮೆ ಕಾಣುತ್ತಿರುವ ಹುಲಿಯಿಂದ ಕೃಷಿ ಚಟುವಟಿಕೆಗೆ ತೊಡಕಾಗಿದೆ, ಹಗಲಿನಲ್ಲೂ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ, ಹುಲಿ ಓಡಾಡುತ್ತಿರುವುದು ಅರಣ್ಯ ಇಲಾಖೆಗೂ ತಿಳಿದಿದ್ದು ಡ್ರೋನ್ ಸರ್ವೇ ಮಾಡಿಸಿ ಹುಲಿಯನ್ನು ಕಾಡಿಗಟ್ಟಬೇಕಿದೆ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹೋಂ ವರ್ಕ್ ಮಾಡದ ಮಗನ ಕೈ,ಕಾಲು ಕಟ್ಟಿ ಫ್ಯಾನಿಗೆ ನೇತು ಹಾಕಿದ ತಂದೆ
ಇದೀಗ ಸೆರೆಸಿಕ್ಕ ಚಿರತೆಯನ್ನು ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯಕ್ಕೆ ಬಿಡಲಾಗಿದ್ದು ಈ ಭಾಗದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ಸೆರೆಸಿಕ್ಕ ಮೂರನೇ ಚಿರತೆ ಇದಾಗಿದೆ.