ನವದೆಹಲಿ: ಮುಳ್ಳುಹಂದಿಯನ್ನು ಅಡ್ಡಗಟ್ಟಿ ಬೇಟೆಯಾಡಲು ಹೋದ ಚಿರತೆಯೊಂದು ಮುಖ ಪರಚಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚಿರತೆ ಮತ್ತು ಮುಳ್ಳುಹಂದಿ ನಡುವಿನ ರೋಚಕ ಕದನದ ಹಳೇ ವಿಡಿಯೋ ಇದು. ಇದರಲ್ಲಿ ಚಿರತೆ ಮುಳ್ಳುಹಂದಿಯ ಮುಳ್ಳಿನಿಂದ ಒಳ್ಳೆಯ ಪಾಠ ಕಲಿತಿದೆ ಎಂದು ಬರೆದುಕೊಂಡಿದ್ದಾರೆ.
https://twitter.com/ParveenKaswan/status/1197117490452545536
58 ಸೆಕೆಂಡ್ ಇರುವ ಈ ವಿಡಿಯೋವನ್ನು ರಾತ್ರಿ ಸಮಯದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋದಲ್ಲಿ ಕಾಡು ಮಧ್ಯೆ ಇರುವ ರಸ್ತೆಯಲ್ಲಿ ಮುಳ್ಳುಹಂದಿ ಮತ್ತು ಚಿರತೆ ಮುಖಾಮುಖಿ ಆಗುತ್ತವೆ. ಈ ವೇಳೆ ಮುಳ್ಳುಹಂದಿಯನ್ನು ಬೇಟೆಯಾಡಲು ಚಿರತೆ ಮುಂದಾಗುತ್ತದೆ. ಆದರೆ ಬುದ್ಧಿವಂತ ಹಂದಿ ತನ್ನ ಮುಳ್ಳುಗಳ ಮೂಲಕ ತನ್ನನ್ನು ಉಳಿಸಿಕೊಳ್ಳುತ್ತದೆ. ಭೇಟೆಯಾಡಲು ಬಾಯಿ ಹಾಕಿದ ಚಿರತೆ ಮುಖ ಪರಚಿಸಿಕೊಂಡು ಮುಳ್ಳು ಚುಚ್ಚಿಸಿಕೊಂಡು ಬಂದ ದಾರಿಯಲ್ಲಿ ವಾಪಸ್ ಹೋಗುತ್ತದೆ.
ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಬಹಳ ಜನ ಕಾಮೆಂಟ್ ಮಾಡಿದ್ದಾರೆ. ಮುಳ್ಳುಹಂದಿಯ ಸಹವಾಸ ಮಾಡಿ ಚಿರತೆ ಒಳ್ಳೆಯ ಪಾಠವನ್ನೆ ಕಲಿತುಕೊಂಡಿತು ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಪಾಪ ಚಿರತೆಗೆ ತುಂಬಾ ನೋವಾಗಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಈ ವಿಡಿಯೋ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಪರ್ವೀನ್ ಕಸ್ವಾನ್ ಅವರು, ಈ ಟ್ವಿಟ್ಟರ್ ನಲ್ಲಿ ಮುಳ್ಳುಹಂದಿಯ ಬಲಿಷ್ಠ ಮುಳ್ಳಿನ ಫೋಟೋವನ್ನು ಶೇರ್ ಮಾಡಿದ್ದಾರೆ. ಇದು ಮುಳ್ಳುಹಂದಿಯ ಬಲಿಷ್ಠ ಮುಳ್ಳು. ಈ ಪ್ರಾಣಿ ಇದನ್ನು ತನ್ನ ಜೀವ ರಕ್ಷಣೆಗಾಗಿ ಬಳಸಿಕೊಳ್ಳುತ್ತದೆ. ಒಂದು ಮುಳ್ಳುಹಂದಿಯಲ್ಲಿ ಸುಮಾರು ಮೂರು ಸಾವಿರ ಮುಳ್ಳುಗಳು ಇರುತ್ತವೆ ಎಂದು ಬರೆದುಕೊಂಡಿದ್ದಾರೆ.