ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿದ್ದು, ನಿಂಬೆ ಹಣ್ಣು ರೇವಣ್ಣ ವಾಮಾಚಾರಕ್ಕೆ ಮುಂದಾಗಿದ್ದಾರೆ. ಅವರ ವಾಮಾಚಾರ ಸಫಲವಾಗುವುದಿಲ್ಲ ಎಂದು ಶಾಸಕ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.
ಬಿಜೆಪಿ ಶಾಸಕರ ರೆಸಾರ್ಟ್ ವಾಸ್ತವ್ಯದ ಕುರಿತು ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಒಟ್ಟಿಗಿದ್ದೇವೆ, ರಿವರ್ಸ್ ಆಪರೇಷನ್ ಭಯ ಇಲ್ಲ. ನಮಗೆಲ್ಲ ಸಂಸ್ಕೃತಿ, ಸಂಸ್ಕಾರ ಇದೆ. ಮುಖ್ಯಮಂತ್ರಿ ವಾಮಮಾರ್ಗ ಅನುಸರಿಸುತ್ತಿದ್ದಾರೆ. ಸಿಎಂ ಕೀಳು ಮಟ್ಟದ ರಾಜಕಾರಣ ನಡೆಸುತ್ತಿದ್ದಾರೆ. ರಿವರ್ಸ್ ಆಪರೇಷನ್ ನಡೆಯಲ್ಲ. ಗೌರವದಿಂದ ಸಿಎಂ ಅವರು ರಾಜೀನಾಮೆ ನೀಡಿ ಹೋಗಬೇಕು. ನಿಂಬೆ ಹಣ್ಣು ರೇವಣ್ಣ ವಾಮಾಚಾರ ಮಾಡಿಸುತ್ತಿದ್ದು, ರೇವಣ್ಣ ಅವರ ವಾಮಾಚಾರ ಸಫಲ ಆಗುವುದಿಲ್ಲ. ರೇವಣ್ಣ ಅವರ ವಾಮಾಚಾರದಿಂದಲೇ ದೇವೇಗೌಡರು ಹಾಸನ ಬಿಟ್ಟು ಬರುವಂತಾಯಿತು ಎಂದು ಗುಡುಗಿದರು.
ಎಷ್ಟು ದಿನ ರೆಸಾರ್ಟ್ ವಾಸ್ತವ್ಯ ಎಂದು ನಮ್ಮ ನಾಯಕರು ತೀರ್ಮಾನಿಸುತ್ತಾರೆ. ಸೋಮವಾರದವರೆಗೋ ಇಲ್ಲವೆ ಬುಧವಾರದವರೆಗೋ ಎಂಬುದನ್ನು ಯಡಿಯೂರಪ್ಪನವರು ನಿರ್ಧರಿಸುತ್ತಾರೆ. ನಾವು ಯಾರೂ ಕ್ಷೇತ್ರವನ್ನು ನಿರ್ಲಕ್ಷಿಸಿಲ್ಲ. ಸೋಮವಾರ ಇಲ್ಲಿಂದಲೇ ಒಟ್ಟಿಗೆ ಸದನಕ್ಕೆ ಹೋಗುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.
ಇದೇ ವೇಳೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಪಕ್ಷ ಬಿಡಲ್ಲ. 99ರಲ್ಲಿ ನಾನು ರಾಜಕೀಯಕ್ಕೆ ಸೇರಿದ್ದು, ಆಗಿನಿಂದಲೂ ಪಕ್ಷದಲ್ಲಿ ನಿಷ್ಠೆಯಿಂದ ಇದ್ದೇನೆ ಎಂದು ತಿಳಿಸಿದರು.
ಶಿರಗುಪ್ಪ ಶಾಸಕ ಸೋಮಲಿಂಗಪ್ಪ ಮಾತನಾಡಿ, ನನ್ನ ಹೆಸರು ರಿವರ್ಸ್ ಆಪರೇಷನ್‍ನಲ್ಲಿ ಕೇಳಿ ಬರುತ್ತಿದ್ದು ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಒಂದು ತಿಂಗಳಿಂದಲೂ ನನ್ನ ಹೆಸರು ಕೇಳಿ ಬರುತ್ತಿದೆ. ಆದರೆ, ನನಗೆ ಯಾರೂ ಕರೆ ಮಾಡಿಲ್ಲ. ನಾನು ಪಕ್ಷ ಬಿಟ್ಟು ಹೋಗಲ್ಲ. ಯಡಿಯೂರಪ್ಪನವರು ಕೆಜೆಪಿ ಪಕ್ಷ ಕಟ್ಟಿದಾಗಲೂ ನಾನು ಅವರ ಜೊತೆ ಹೋಗಲಿಲ್ಲ. ನಾನು ವಿದ್ಯಾರ್ಥಿ ದೆಸೆಯಿಂದಲೂ ಬಿಜೆಪಿಯಲ್ಲಿದ್ದೇನೆ. ಬಿಜೆಪಿಯಲ್ಲೇ ಇರುತ್ತೇನೆ. ಯಾರೋ ಕಿತಾಪತಿ ಮಾಡಿ ನನ್ನ ಹೆಸರು ತೇಲಿ ಬಿಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.