ಚಾಮರಾಜನಗರ: ಆಷಾಢ ಮಾಸದಲ್ಲಿ ಶುಭಕಾರ್ಯಗಳು ನಿಷಿದ್ಧ. ಆದರೆ ದೇವತೆಗಳಿಗೆ ಈ ಮಾಸದಲ್ಲಿ ಹೆಚ್ಚು ಶಕ್ತಿ ಇರುತ್ತದೆ ಎಂಬ ನಂಬಿಕೆಯಿದೆ. ಅದರಲ್ಲೂ ಆಷಾಢ ಶುಕ್ರವಾರಗಳಂದು ದೇವತೆಗಳಿಗೆ ನಿಂಬೆ ಹಣ್ಣಿನಿಂದ ದೀಪ ತಯಾರಿಸಿ ನಿಂಬೆ ಹಣ್ಣಿನ ದೀಪದಾರತಿ ಮಾಡಿದ್ರೆ ಎಲ್ಲ ಕಷ್ಟಗಳು ಮಂಜಿನಂತೆ ಮಾಯವಾಗುತ್ತದೆ ಎಂದು ಇತಿಹಾಸ ಹೇಳುತ್ತದೆ.
ಮಹತ್ವವೇನು?
ಆಷಾಢ ಶುಕ್ರವಾರ ಬಂತೆಂದೆರೆ ಶಕ್ತಿಯುತವಾದ ಹೆಣ್ಣು ದೇವತೆಗಳಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಪ್ರತಿ ವರ್ಷ ಆಷಾಡ ಮಾಸದ ಪ್ರತಿ ಶುಕ್ರವಾರ ಮಹಿಳೆಯರು ನಿಂಬೆ ಹಣ್ಣಿನಿಂದ ದೀಪ ತಯಾರಿಸಿ ಹೆಣ್ಣು ದೇವತೆಗಳಿಗೆ ಆರತಿ ಮಾಡುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿರುವ ಚಾಮುಂಡೇಶ್ವರಿ ದೇವಾಲಯಕ್ಕೆ ಮಹಿಳೆಯರು ನಿಂಬೆಹಣ್ಣಿನ ಆರತಿ ಸಲ್ಲಿಸಿ ಪೂಜೆ ಮಾಡಿದ್ರು. ಇದನ್ನೂ ಓದಿ: 16 ವರ್ಷದ ಬಾಲಕಿ ಮೇಲೆ ಚಾಕು ಇರಿದು ಹಲ್ಲೆ – ಪೊಲೀಸರಿಗೆ ಮಹಿಳಾ ಆಯೋಗದಿಂದ ನೋಟಿಸ್
ಹೆಣ್ಣು ದೇವತೆಗಳಿಗೆ ಪ್ರಿಯವಾದ ನಿಂಬೆ ಹಣ್ಣಿನ ದೀಪದಿಂದ ಪೂಜೆ ಸಲ್ಲಿಸಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ಇದೆ. ವಿವಾಹಿತ ಮಹಿಳೆಯರು ತಮ್ಮ ಮುತ್ತೈದೆ ಭಾಗ್ಯ ದೀರ್ಘಕಾಲ ಉಳಿಯಲಿ ಎಂದು ನಿಂಬೆ ಹಣ್ಣಿನ ಆರತಿ ಮಾಡಿದರೆ, ಯುವತಿಯರು ಆದಷ್ಟು ಬೇಗ ಕಂಕಣಭಾಗ್ಯ ಕೂಡಿ ಬರಲಿ ಎಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.
ಈಶ್ವರ ಅಭಿಷೇಕ ಪ್ರಿಯನಾದರೆ, ವಿಷ್ಣು ಅಲಂಕಾರ ಪ್ರಿಯ. ಆದೇ ರೀತಿ ಚಾಮುಂಡೇಶ್ವರಿ ದೇವಿ ಸ್ತೋತ್ರ ಪ್ರಿಯಳಾಗಿದ್ದಾಳೆ. ಆಷಾಡ ಮಾಸದಲ್ಲಿ ದೇವಿಯನ್ನು ಸ್ಮರಿಸಿ ಸ್ತೋತ್ರ ಹೇಳಿದರೆ ದೇವಿ ನಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡುತ್ತಾಳೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಮಹಿಳೆಯರು ಆಗಮಿಸಿ ಇಷ್ಟಾರ್ಥ ಈಡೇರಲಿ ಎಂದು ನಿಂಬೆಹಣ್ಣಿನ ಆರತಿ ಮಾಡುತ್ತಾರೆ.
ಇನ್ನೂ ಕೆಲವರು ಸೇಬು, ನಿಂಬೆ, ಕಿತ್ತಲೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಹಾರ ತಯಾರಿಸಿ ದೇವರಿಗೆ ಆರ್ಪಿಸುತ್ತಾರೆ. ನಿಂಬೆಹಣ್ಣಿಗೆ ಆಕರ್ಷಣಾ ಶಕ್ತಿ ಹೆಚ್ಚು. ಹೀಗಾಗಿ ನಿಂಬೆಹಣ್ಣನ್ನು ದೇವತ ಪಾದಕ್ಕೆ ಹಿಂಡಿ ಅದರ ಸಿಪ್ಪೆಯಿಂದ ದೀಪ ತಯಾರಿಸಿ ಅದರಿಂದ ಆರತಿ ಮಾಡಿದರೆ ಸಕಲ ಇಷ್ಟಾರ್ಥಗಳು ಸಿದ್ದಿಸುತ್ತವೆ ಎಂಬ ನಂಬಿಕೆ ಇದೆ ಎಂದು ಅರ್ಚಕ ನಾಗರಾಜು ದೀಕ್ಷೀತ್ ವಿವರಿಸಿದ್ದಾರೆ. ಇದನ್ನೂ ಓದಿ: ವಿದ್ಯಾಕಾಶಿ ಜನರಿಗೆ ದೇವಸ್ಥಾನ ಕಟ್ಟಿಸೋದಾಗಿ ಹೇಳಿ ಹಣ ಪಡೆದಿದ್ದ ಚಂದ್ರಶೇಖರ್ ಗುರೂಜಿ ಹಂತಕ
ಒಟ್ಟಾರೆ ಆಷಾಢ ಶುಕ್ರವಾರವಾದ ಇಂದು ಚಾಮುಂಡೇಶ್ವರಿ ದೇವಾಲಯದಲ್ಲಿ ಭಕ್ತರ ದಂಡೆ ನೆರೆದಿತ್ತು. ದೇವಾಲಯದ ಅಂಗಳದ ತುಂಬಾ ಮಹಿಳೆಯರು ನಿಂಬೆ ಹಣ್ಣಿನಿಂದ ದೀಪ ತಯಾರಿಸಿ ದೇವಿಗೆ ಆರತಿ ಬೆಳಗುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು.