– ಮಾನವೀಯತೆ ಮರೆತ ಕಾಲೇಜು ವಿರುದ್ಧ ದೂರು
ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಭಂಡಾರ್‍ಕಾರ್ಸ್ ಕಾಲೇಜಿನ ಕನ್ನಡ ಉಪನ್ಯಾಸಕಿಯೊಬ್ಬರು ಹೆರಿಗೆಗೆ ಹೋದಾಗ ಕಾಲೇಜು ಆಡಳಿತ ಮಂಡಳಿ ಅವರನ್ನು ಕೆಲಸದಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.
ಡಾ.ಸೌಮ್ಯ ಕಾಲೇಜಿನಿಂದ ವಜಾಗೊಂಡ ಉಪನ್ಯಾಸಕಿ. 7 ತಿಂಗಳ ಗರ್ಭಿಣಿಯಾಗಿದ್ದ ಸೌಮ್ಯಾ ಅವರು ಜನವರಿ 30 ರಂದು ಕಾಲೇಜಿನಲ್ಲಿ ಕನ್ನಡ ಕ್ಲಾಸ್ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ತೀವ್ರ ಹೊಟ್ಟೆ ನೋವಿಗೆ ಒಳಗಾದರು. ಕೂಡಲೇ ಸೌಮ್ಯಾ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯ್ತು. ಸೌಮ್ಯಾ ಅವರಿಗೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಸಿಸೇರಿಯನ್ ಮಾಡಿ ಹೆರಿಗೆ ಮಾಡಿಸಲಾಯ್ತು.
Advertisement
Advertisement
ಮಗುವಿಗೆ ಜನ್ಮ ನೀಡಿದ ನಂತರ ಸೌಮ್ಯ ಅವರು 15 ದಿನ ಆಸ್ಪತ್ರೆಯ ಐಸಿಯುನಲ್ಲೇ ಮಗುವಿನ ಜೊತೆ ಇರಬೇಕಾಯ್ತು. ಚಿಕಿತ್ಸೆ ಪಡೆದು ಸುಧಾರಿಸಿಕೊಂಡು ಮನೆಗೆ ಬಂದ ಕೂಡಲೇ ಸೌಮ್ಯಾ ಅವರಿಗೆ ಶಾಕ್ ಕಾದಿತ್ತು. ರಜೆಯ ಬಗ್ಗೆ ಲಿಖಿತ ಮಾಹಿತಿ ನೀಡದಿರುವುದರಿಂದ ನಿಮ್ಮನ್ನು ಸೇವೆಯಿಂದ ವಜಾ ಮಾಡಿದ್ದೇವೆ ಎಂದು ನಿಷ್ಕರುಣಿ ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಡಿಸ್ಮಿಸ್ ನೋಟೀಸ್ ಕಳುಹಿಸಿದ್ದಾರೆ.
Advertisement
Advertisement
ಮಂಗಳೂರು ವಿವಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿರುವ ಸೌಮ್ಯಾ, ಪಿಎಚ್‍ಡಿ ಕೂಡಾ ಮಾಡಿದ್ದಾರೆ. ಗರ್ಭಿಣಿಯರಿಗೆ 6 ತಿಂಗಳು ರಜೆ ನೀಡಬೇಕೆಂದು ಕೇಂದ್ರ ಸರ್ಕಾರ ಆದೇಶ ಮಾಡಿದೆ. ರಾಜ್ಯದ ಎಲ್ಲಾ ವಲಯಗಳಲ್ಲಿ 3 ತಿಂಗಳು ಕಡ್ಡಾಯ ರಜೆಯಿದೆ. ಆದರೆ ಬಾಣಂತಿ ಆಸ್ಪತ್ರೆಯಲ್ಲಿರುವಾಗಲೇ ಸೇವೆಯಿಂದ ವಜಾಗೊಳಿಸಿದ ಪ್ರಾಂಶುಪಾಲ ನಾರಾಯಣ ಶೆಟ್ಟಿ ಮತ್ತು ಆಡಳಿತ ಮಂಡಳಿ ವಿರುದ್ಧ ಸೌಮ್ಯಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಹಿಳಾ ಮಕ್ಕಳ ದೌರ್ಜನ್ಯ ತಡೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ. ಅಮಾನವೀಯವಾಗಿ ನಡೆದುಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.