ಕೊಪ್ಪಳ: ಜಿಲ್ಲೆಯ ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜಿನ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡು ಎರಡು ವರ್ಷಗಳು ಕಳೆದಿವೆ. ಆದರೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಅಲ್ಲಿಯೇ ಕುಳಿತು ವಿದ್ಯಾರ್ಥಿಗಳು ಉಪನ್ಯಾಸಕರಿಂದ ಪಾಠ ಆಲಿಸುತ್ತಿದ್ದಾರೆ. ಕೆಲ ತರಗತಿಗಳು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯುತ್ತಿವೆ.
ಕಟ್ಟಡ ನಿರ್ಮಾಣಕ್ಕೆ ಎರಡು ವರ್ಷಗಳ ಹಿಂದೆಯೇ ಹಣ ಬಿಡುಗಡೆಯಾಯಿತು. ಆದರೆ ಗುತ್ತಿಗೆದಾರರು ತೋರಿದ ನಿರಾಸಕ್ತಿಯಿಂದ ಕಾಮಗಾರಿ ಬೇಗನೇ ಪೂರ್ಣಗೊಳ್ಳಲಿಲ್ಲ. ಇದರ ಪರಿಣಾಮ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಉಪನ್ಯಾಸಕರೂ ಸಹ ತೊಂದರೆ ಅನುಭವಿಸುವಂತಾಗಿದೆ.
Advertisement
Advertisement
ಕಾಲೇಜಿನಲ್ಲಿ ಕಲಾ ವಿಭಾಗ ಒಂದೇ ಇದ್ದು, 50 ವಿದ್ಯಾರ್ಥಿಗಳು ಇದ್ದಾರೆ. ಆದರೆ ಕಟ್ಟಡವು ನಿರ್ಮಾಣ ಹಂತದಲ್ಲಿ ಇರುವ ಕಾರಣ ಕೊಠಡಿ, ಬೆಂಚ್, ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಇಲ್ಲ. ಕಾಯಂ ಉಪನ್ಯಾಸಕರು ಇಲ್ಲದ ಕಾರಣ ಅತಿಥಿ ಉಪನ್ಯಾಸಕರಿಂದಲೇ ಕಾಲೇಜು ನಡೆಯುತ್ತಿದೆ. ಆದರೆ ಆರು ತಿಂಗಳನಿಂದ ಸರಿಯಾಗಿ ಗೌರವಧನ ಸಿಗದ ಕಾರಣ ಅತಿಥಿ ಉಪನ್ಯಾಸಕರಿಗೆ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ.
Advertisement
ಕಾಲೇಜಿನ ಅವ್ಯವಸ್ಥೆ ಮತ್ತು ಮೂಲಸೌಕರ್ಯ ಕೊರತೆ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲು ಯಾರೂ ಸಹ ಇಚ್ಛಿಸುತ್ತಿಲ್ಲ. ಸಮಸ್ಯೆ ಆಲಿಸಲು ಮತ್ತು ಮೂಲಸೌಕರ್ಯ ಪೂರೈಸಲು ಸಹ ಯಾರೂ ಗಮನ ಹರಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ತಿಳಿಸಿದರು.