ಕಲಬುರಗಿ: ಮನ್ ಕಿ ಬಾತ್ ಬಿಟ್ಟು ಕಾಮ್ ಕಿ ಬಾತ್ ಆರಂಭಿಸಿ (ಮನದ ಮಾತು ಬಿಟ್ಟು ಕೆಲಸದ ಮಾತು ಆರಂಭಿಸಿ) ಅಂತಾ ಪ್ರಧಾನಿ ನರೇಂದ್ರ ಮೋದಿಗೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿವಿ ಮಾತು ಹೇಳಿದ್ದಾರೆ.
ಕಲಬುರಗಿಯಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಖರ್ಗೆ, ಒಂದು ರಾಜ್ಯದ ಚುನಾವಣೆಯ ಹಿನ್ನೆಲೆಯಲ್ಲಿ ಓರ್ವ ಪ್ರಧಾನಿಯಾಗಿ ಗಲ್ಲಿ ಗಲ್ಲಿಯಲ್ಲಿ ಚುನಾವಣಾ ಪ್ರಚಾರ ಮಾಡೋದು ನಗೆಪಾಟಲಿಗೀಡು ಮಾಡಿದೆ. ನನ್ನ ಹೆಸರು ಹೇಳಿದ್ರೆ ಮತ ಹಾಕ್ತಾರೆ ಅನ್ನೊ ಭ್ರಮೆಯಲ್ಲಿದ್ದಾರೆ ಪ್ರಧಾನಿಯವರು. ಜಿಡಿಪಿ ಹೆಚ್ಚಳದ ಅಂಕಿ ಅಂಶಗಳು ಸುಳ್ಳಿನ ಕಂತೆ. ಗುರಿ ಕಡಿಮೆ ಮಾಡಿಕೊಂಡು ಜಿಡಿಪಿ ಬೆಳವಣಿಗೆ ಹೆಚ್ಚಳ ತೋರಿಸಿದ್ದಾರೆ. ಕೇಂದ್ರ ಸರ್ಕಾರ ಚುನಾವಣೆಗೋಸ್ಕರ ತಯಾರಿಸಿದ ಅಂಕಿ ಅಂಶ ಇದಾಗಿದೆ ಅಂತಾ ಗುಡುಗಿದ್ರು.
Advertisement
ಭಾರತೀಯರ ಮೇಲಿನ ದಾಳಿಗೆ ಖಂಡನೆ: ಅಮೆರಿಕದಲ್ಲಿ ಭಾರತೀಯರ ಮೇಲಿನ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿದ ಖರ್ಗೆ, ಈ ಕುರಿತು ಪ್ರಧಾನಿ ತಕ್ಷಣವೇ ಅಮೆರಿಕ ಅಧ್ಯಕ್ಷರ ಜೊತೆ ಮಾತನಾಡಬೇಕು. ಭಾರತೀಯರ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವುದು ಖಂಡನೀಯ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸಬಾರದು. ಇದೇ ರೀತಿ ವಿದೇಶದಲ್ಲಿ ಭಾರತೀಯ ಪ್ರಜೆಗಳ ಮೇಲೆ ದಾಳಿ ಮುಂದುವರೆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಯುದ್ಧಕ್ಕೆ ನಾಂದಿ ಹಾಡಲಿದೆ ಅಂತಾ ಖರ್ಗೆ ಎಚ್ಚರಿಕೆ ನೀಡಿದ್ರು.