ಬೆಂಗಳೂರು: ಇಲ್ಲೇ ಹುಟ್ಟಿ, ಬೆಳೆದು ಕನ್ನಡ ಕಲಿಯದ ಮುಸ್ಲಿಂ ಮಹಿಳೆಯೊಬ್ಬರಿಗೆ ಕನ್ನಡ ಕಲಿಯುವಂತೆ ಹೈಕೋರ್ಟ್ ನ್ಯಾಯಮೂರ್ತಿ ಸಲಹೆ ನೀಡಿದ್ದಾರೆ.
ಕೌಟುಂಬಿಕ ಪ್ರಕರಣ ಸಂಬಂಧ ವಿಚಾರಣೆ ವೇಳೆ ಮಹಿಳೆ ಉರ್ದುವಿನಲ್ಲೇ ಉತ್ತರಿಸುತ್ತಿದ್ದರಿಂದ ಬೇಸರ ವ್ಯಕ್ತಪಡಿಸಿದ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್, `ಕಳೆದ 30 ವರ್ಷಗಳಿಂದ ಕರ್ನಾಟಕದಲ್ಲಿಯೇ ನೆಲೆಸಿದ್ರೂ ಕನ್ನಡ ಭಾಷೆ ಯಾಕೆ ಮಾತನಾಡೋದಿಲ್ಲ..? ಬೇರೆ ರಾಜ್ಯಗಳಿಗೆ ಹೋಗುವ ಕರ್ನಾಟಕದ ಜನ ಅಲ್ಲಿನ ಭಾಷೆ ಕಲಿಯುತ್ತಾರೆ ಅಂತ ವಿಷಾದ ವ್ಯಕ್ತಪಡಿಸಿದರು.
Advertisement
ಏನಿದು ಪ್ರಕರಣ?: ಬ್ಯಾಟರಾಯನಪುರ ನಿವಾಸಿ ಸಬಿಹಾಬಾನು ಎಂಬವರು ತನ್ನ ಪತಿ ಮತ್ತು ಆತನ ಸಂಬಂಧಿಕರು ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಅಂತ ಕಳೆದ ಮೇ 8ರಂದು ದೂರು ನೀಡಿದ್ದರು. ಮಹಿಳೆಯ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು.
Advertisement
ಆದ್ರೆ ಸಬಿಹಾಬಾನು ಅವರ ಪತಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿ, ತಮ್ಮ ವಿರುದ್ಧದ ಎಫ್‍ಐಆರ್ ರದ್ದು ಪಡಿಸಲು ಕೋರಿದ್ದರು. ಅಂತೆಯೇ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಶುಕ್ರವಾರ ಅರ್ಜಿ ವಿಚಾರಣೆ ನಡೆಸಿತ್ತು. ವಿಚಾರಣೆ ವೇಳೆ ಸಬಿಹಾಬಾನು ಪರ ವಕೀಲ ಬೈರೇಶ್ ಮತ್ತು ಆಕೆಯ ಪತಿ ಪರ ವಕೀಲ ಲಕ್ಷ್ಮೀಕಾಂತ್ ಜಂಟಿಯಾಗಿ ಪ್ರಮಾಣ ಪತ್ರ ಸಲ್ಲಿಸಿ, ದಂಪತಿ ನಡುವಿನ ಕಲಹ ಬಗೆಹರಿದಿದ್ದು, ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ದೂರು ನೀಡಿದ್ದ ಸಬಿಹಾಬಾನು ದೂರು ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ. ಆದ್ದರಿಂದ ಪತಿ ವಿರುದ್ಧದ ಎಫ್‍ಐಆರ್ ಮತ್ತು ಹೈಕೋರ್ಟ್ ನಲ್ಲಿ ನಡೆಯೋ ವಿಚಾರಣೆ ರದ್ದುಪಡಿಸುವಂತೆ ಮನವಿ ಮಾಡಿದ್ರು.
Advertisement
ಅಂತೆಯೇ ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್, ಕೋರ್ಟ್‍ನಲ್ಲಿ ಹಾಜರಿದ್ದ ಸಬಿಹಾಬಾನು ಅವರನ್ನು ಕರೆದು, ಪತಿ ಹಾಗೂ ಸಂಬಂಧಿಕರ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯುತ್ತೀರಾ ಎಂದು ಕನ್ನಡದಲ್ಲಿ ಪ್ರಶ್ನಿಸಿದ್ರು. ಈ ವೇಳೆ ಮಹಿಳೆ ಮರು ಮಾತನಾಡದೆ ಸುಮ್ಮನಿದ್ದರು. ನಾನು ಹೇಳುತ್ತಿರುವುದು ಅರ್ಥವಾಗುತ್ತಿದೆಯೇ ಎಂದು ಮತ್ತೆ ಹಿಂದಿಯಲ್ಲಿ ಪ್ರಶ್ನಿಸಿದ್ರು. ಈ ಸಂದರ್ಭದಲ್ಲಿಯೂ ಮಹಿಳೆ ಸುಮ್ಮನಾಗಿರೋದನ್ನು ಕಂಡ ಜಡ್ಜ್, ನಿಮಗೆ ಯಾವ ಭಾಷೆ ಬರುತ್ತದೆ ಎಂದು ಮತ್ತೂಮ್ಮೆ ಪ್ರಶ್ನಿಸಿದಾಗ ಉರ್ದು ಮಾತ್ರ ಬರುವುದಾಗಿ ಉತ್ತರಿಸಿದ್ರು.
Advertisement
ಇದರಿಂದ ಬೇಸರಗೊಂಡ ಜಡ್ಜ್, ನೀವು ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು ಕನ್ನಡ ಯಾಕೆ ಕಲಿತಿಲ್ಲ ಅಂತ ಪ್ರಶ್ನಿಸಿದ್ರು. ಈ ವೇಳೆ ಉರ್ದು ತಿಳಿದ ವಕೀಲರೊಬ್ಬರು ನ್ಯಾಯಾಮೂರ್ತಿಗಳು ಏನು ಹೇಳಿದ್ದಾರೆ ಎನ್ನುವುದನ್ನು ಆಕೆಗೆ ತಿಳಿಸಿದರು. ಪ್ರಶ್ನೆಗೆ ಉತ್ತರಿಸಿದ ಮಹಿಳೆ, ನನಗೆ ಕನ್ನಡ ಮಾತನಾಡಲು ಬರೋದಿಲ್ಲ, ಉರ್ದು ಮಾತ್ರ ಬರುತ್ತೆ ಅಂತ ಉರ್ದುವಿನಲ್ಲಿ ಉತ್ತರಿಸಿದ್ದಾರೆ.
ಕೊನೆಗೆ ನ್ಯಾಯಮೂರ್ತಿ ಅವರು ಮುಸ್ಲಿಂ ಮಹಿಳೆಗೆ ಇನ್ನಾದರೂ ಕನ್ನಡ ಕಲಿಯುವಂತೆ ಮೌಖಿಕ ಸೂಚನೆ ನೀಡಿ ಪ್ರಕರಣವನ್ನು ವಿಲೇವಾರಿ ಮಾಡಿದರು.