Connect with us

Karnataka

ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ: ಶಾಸಕ ತಂಗಡಗಿ

Published

on

Share this

ಬೆಂಗಳೂರು: ಟಿವಿ ಮಾಧ್ಯಮದವರು ಮಾತನಾಡೋ ಬದಲು ಚುನಾವಣೆಗೆ ನಿಲ್ಲಲಿ. ಗ್ರಾಮ ಪಂಚಾಯತ್ ಚುನಾವಣೆಗೆ ನಿಂತು ನೋಡಿ. ಆಗ ಗೊತ್ತಾಗುತ್ತದೆ ಜನರ ಸಮಸ್ಯೆ ಏನು ಅಂತ. ನಾವು ಯಾವ ಬೂಟ್, ವಾಚ್ ಬಟ್ಟೆ ಹಾಕ್ತೀವಿ ಅಂತ ಮಾಧ್ಯಮಗಳಿಗೆ ಹೇಳಬೇಕಾ? ಮಾಧ್ಯಮದವ್ರು ಏನ್ ಬೇಕಾದ್ರೂ ಮಾಡಬಹುದಾ ಎಂದು ಕಾಂಗ್ರೆಸ್ ಶಾಸಕ ಶಿವರಾಜ್ ತಂಗಡಗಿ ಪ್ರಶ್ನೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ನಿಯಮ 69ರ ಅಡಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಮೇಲೆ ಕಡಿವಾಣ ಹಾಕಬೇಕು. 19 ವರ್ಷ ನನ್ನ ಜತೆಗಿದ್ದ ಹೆಂಡತಿ ನನ್ನನ್ನು ಪ್ರಶ್ನೆ ಮಾಡುವಂತಹ ಸ್ಥಿತಿ ತಂದಿದ್ದು ಮಾಧ್ಯಮಗಳು. ಕುಮ್ಮಿ, ಸಿದ್ದು, ಯಡ್ಡಿ ಅಂತಾ ತೋರಿಸ್ತಾರೆ. ಕೆಲ ನ್ಯೂಸ್ ಆಂಕರ್ ಗಳನ್ನು ನೋಡಬೇಕು. ಅಯ್ಯೋ… ಎಲ್ಲರೂ ಮುಗಿ ಬೀಳ್ತಾರೆ. ಏಕ ವಚನದಲ್ಲಿ ನಮ್ಮ ಬಗ್ಗೆ ಮಾತಾಡ್ತಾರೆ ಎಂದು ಹೇಳಿದರು.

ಇವರೇನು ಬಾಹುಬಲಿಗಳಾ: ಅಳಂದದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಮಾತನಾಡಿ, ಯಾರು ಎಲ್ಲಿ ಕುಳಿತು ಏನು ಬೇಕಾದ್ರೂ ಮಾತಾಡಬಹುದಾ? ಸ್ಟುಡಿಯೋದಲ್ಲಿ ನಾಲ್ಕು ಗೋಡೆಗಳ ಕುಳಿತು ಏನು ಬೇಕಾದ್ರೂ ಮಾತಾಡಬಹುದಾ? ಸ್ವಾತಂತ್ರ್ಯದ ಹೆಸರಿನಲ್ಲಿ ಏನು ಬೇಕಾದರೂ ಮಾಡಬಹುದಾ? ನಾವು ಸದನದಲ್ಲಿ ತೂಕಡಿಸಿದ್ರೂ ಸುದ್ದಿ ಮಾಡ್ತಾರೆ. ನಾವು ಮನುಷ್ಯರಲ್ಲವಾ? ನಮ್ಮ ತಪ್ಪುಗಳನ್ನು ಎತ್ತಿ ತೋರಿಸಲಿ. ಆದ್ರೆ ಸ್ಟುಡಿಯೋದಲ್ಲಿ ಕುಳಿತು ಮಾತಾಡೋದಕ್ಕೆ ಇವರೇನು ಬಾಹುಬಲಿಗಳಾ ಎಂದು ಪ್ರಶ್ನಿಸಿದರು.

ಮಾಧ್ಯಮದವರನ್ನು ಕಾನೂನು ಮೂಲಕ ಕಂಟ್ರೋಲ್ ಮಾಡಲು ಸಾಧ್ಯವಿಲ್ಲ. ಅವರೇ ದೂರುದಾರರು, ಅವರೇ ವಕೀಲರು ಕೊನೆಗೆ ಅವರೇ ಜಡ್ಜ್‍ಮೆಂಟ್ ಕೊಡ್ತಾರೆ ಎಂದು ಆರೋಪಿಸಿದರು.

ತೇಜೋವಧೆ ಆಗ್ತಿದೆ: ಶಾಸಕ ಸುರೇಶ್ ಗೌಡ ಮಾತನಾಡಿ, ನಮ್ಮನ್ನು ಗೂಂಡಾಗಿರಿ, ರೌಡಿ ಎಂದು ಕರೆಯುತ್ತಾರೆ. ಗೂಂಡಾಗಿರಿ ಎನ್ನುವ ಪದಕ್ಕೆ ಅರ್ಥ ಏನು ಎಂದು ಪ್ರಶ್ನಿಸಿದರು. ಈ ವೇಳೆ ತುಮಕೂರು ಟೋಲ್ ಗಲಾಟೆಯನ್ನು ಪ್ರಸ್ತಾಪಿಸಿದ ಅವರು ಮ್ಯಾನೇಜರ್‍ಗೆ ಬೈಯ್ದು ಬಂದಿದ್ದು ಸತ್ಯ. ಪಬ್ಲಿಕ್ ಟಿವಿಯವರು ನನ್ನ ಪ್ರತಿಕ್ರಿಯೆ ಕೇಳಿದ್ರು. ಆ ಬಳಿಕ ಸುದ್ದಿ ಬೇರೆ ಚಾನೆಲ್ ಗಳಲ್ಲೂ ಬಂತು. ಬೇರೆ ಚಾನೆಲ್‍ಗಳು ನನ್ನ ರೌಡಿ ಶಾಸಕ ಅಂತಾ ತೋರಿಸಿದ್ರು. ನನ್ನ ಮೇಲೆ ತೇಜೋವಧೆ ನಡೆಯುತ್ತಿದೆ ಎಂದು ಹೇಳಿದರು.

ನಮಗೂ ಗೌರವ ಇಲ್ವಾ: ಶಾಸಕ ರಾಜು ಕಾಗೆ ಮಾತನಾಡಿ, ಕಾಗೆ ಎಲ್ಲಿ ಹುಡುಕಿ ಅಂತಾ ಪದ ಬಳಸಿದ್ದಾರೆ. ನನ್ನ ಬಗ್ಗೆ ಇಲ್ಲಸಲ್ಲದ ಪದ ಬಳಸಿದ್ದಾರೆ. ಇವರಿಗೆ ಅಧಿಕಾರವನ್ನು ಕೊಟ್ಟವರು ಯಾರು? ನನಗೂ ಪ್ರಕರಣಕ್ಕೂ ಸಂಬಂಧವೇ ಇರಲಿಲ್ಲ. ಕರಡಿ ಹಿಡಿಯುತ್ತೀರಾ. ಹುಲಿ ಹಿಡಿಯುತ್ತೀರಾ? ಕಾಗೆ ಹಿಡಿಯೋದಕ್ಕೆ ಆಗಲ್ವಾ ಅಂತಾ ತೋರಿಸಿದ್ರು. ನಾನು ಅವತ್ತು ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾಗ ನನ್ನ ಹೆಣ್ಮಕ್ಕಳು ನನ್ನ ತಡೆದ್ರು. ನಮಗೂ ಮಾನ ಮರ್ಯಾದೆ, ಗೌರವ ಇಲ್ವಾ? ಮಾಧ್ಯಮಗಳ ಮೇಲೆ ನಿಯಂತ್ರಣ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಎಂದರು.

ನಾಚಿಕೆಯಾಗ್ಬೇಕು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಾತನಾಡಿ ಮಾಧ್ಯಮದವರ ಮೇಲೆ ಕೂಡ ಸಾಕಷ್ಟು ಆರೋಪ ಗಳು ಇವೆ. ಮಾಧ್ಯಮದಲ್ಲಿ ಇರೋರು ಎಲ್ಲರೂ ಸತ್ಯ ಹರಿಶ್ಚಂದ್ರರಾ? ಆದ್ರೆ ಇದುವರೆಗೂ ಒಂದೇ ಒಂದು ಸುದ್ದಿ ಬಗ್ಗೆ ಬರೆಯೋದಿಲ್ಲ. ಈ ಹಿಂದೆ ಪೆÇಲೀಸರನ್ನು ನಂಬಬಾರದು ಅಂತ ಮಾತು ಇತ್ತು. ಈಗ ನಮ್ಮ ಜೊತೆ ಇದ್ದು, ನಮ್ಮ ಜೊತೆ ಊಟ ಮಾಡಿ, ಬೆಳಿಗ್ಗೆ ನಮ್ಮ ಬಗ್ಗೆಯೇ ಸುದ್ದಿ ಬರೆಯುತ್ತಾರೆ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ, ನಮ್ಮ ತಟ್ಟೆಯಲ್ಲಿ ನೊಣ ಹುಡುಕುತ್ತಿರಾ.ಮಾಧ್ಯಮಗಳಿಗೆ ಥೂ ನಾಚಿಕೆಯಾಗಬೇಕು ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.

ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ವೈವಾಹಿಕ ಜೀವನ ಸರಿ ಆಗುತ್ತಿತ್ತು. ಆದರೆ ದೃಶ್ಯ ಮಾಧ್ಯಮದವರೇ ಅವರ ಸಂಬಂಧ ಹಾಳು ಮಾಡಿ, ಗಂಡ ಹೆಂಡತಿ ಬೇರೆ ಬೇರೆ ಮಾಡಿದ್ದಾರೆ. ಪತ್ರಕರ್ತರ ಆಗೋಕ್ಕೆ ಒಂದು ಅರ್ಹತೆ ಹಾಗು ಅನುಭವ ನಿಗದಿ ಮಾಡಬೇಕು ಎಂದು ಅವರು ಹೇಳಿದರು.

https://www.youtube.com/watch?v=RplFyEPEAN4

Click to comment

Leave a Reply

Your email address will not be published. Required fields are marked *

Advertisement