ನವದೆಹಲಿ: 2018, ಜನವರಿ 26 ರ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಆಸಿಯಾನ್ (ಆಗ್ನೇಯ ಏಷ್ಯಾ ದೇಶಗಳ ಸಂಘಟನೆ) ಒಕ್ಕೂಟದ 10 ರಾಷ್ಟ್ರಗಳ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ಮೋದಿ ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ವರ್ಷದ ಕೊನೆಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, 2018 ಜನವರಿ 26ರಂದು ನಡೆಯೋ ಗಣರಾಜೋತ್ಸವ ಕಾರ್ಯಕ್ರಮ ದೇಶದ ಇತಿಹಾಸದಲ್ಲೇ ಸ್ಮರಣೀಯವಾಗಿ ಉಳಿಯುತ್ತದೆ. ಆಸಿಯಾನ್ ರಾಷ್ಟ್ರಗಳ ಪ್ರಮುಖ ನಾಯಕರು ದೇಶದ ಮಹತ್ವದ ಸಮಾರಂಭಕ್ಕೆ ಸಾಕ್ಷಿಯಾಲಿದ್ದಾರೆ ಎಂದು ತಿಳಿಸಿದರು.
ಅಲ್ಲದೇ 2017 ವರ್ಷವು ಆಸಿಯಾನ್ ರಾಷ್ಟ್ರ ಒಕ್ಕೂಟ ಹಾಗೂ ಭಾರತಕ್ಕೆ ವಿಶೇಷವಾದ ವರ್ಷವಾಗಿದ್ದು, ಆಸಿಯಾನ್ ರಾಷ್ಟ್ರ ಒಕ್ಕೂಟ ರಚನೆಯಾಗಿ 50 ವರ್ಷಗಳು ಹಾಗೂ ಭಾರತ ಈ ಒಕ್ಕೂಟವನ್ನು ಸೇರಿ 25 ವರ್ಷಗಳು ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಇದೇ ವೇಳೆ ಮುಂದಿನ ವರ್ಷದ ಆಗಸ್ಟ್ 15 ಅನ್ನು ಗುರಿಯಾಗಿಸಿಕೊಂಡು ದೆಹಲಿಯಲ್ಲಿ ಅಣಕು ಸಂಸತ್ ನಡೆಸುವ ವಿಷಯವನ್ನು ಪ್ರಸ್ತಾಪಿಸಿದರು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಜಿಲ್ಲೆಗಳಿಂದ ಯುವ ಪೀಳಿಗೆಯನ್ನು ಆಯ್ಕೆ ಮಾಡುವ ಮೂಲಕ ಮುಂದಿನ 5 ವರ್ಷಗಳಲ್ಲಿ ಭಾರತ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬುವುದರ ಬಗ್ಗೆ ಯುವ ಸಮುದಾಯದಿಂದ ಸಲಹೆಗಳನ್ನು ಪ್ರಸ್ತುತ ಪಡಿಸಲಾಗುವುದು ಎಂದರು.