ಫೋನಿಗೆ ಬಂದಿದ್ದ ಫೋಟೋ ನೋಡಿ ಹೊರಗೆ ಬಂದ ಲಕ್ಷ್ಮಣ್ – ಕ್ಷಣಾರ್ಧದಲ್ಲಿ ಹತ್ಯೆ

Public TV
3 Min Read
LAXMAN PHOTO

– ಲಂಡನಿನಲ್ಲೇ ಕುಳಿತು ಕೊಲೆಗೆ ವರ್ಷಿಣಿ ಸ್ಕೆಚ್
– ಕಾಲ್ಸ್ ವಿವರಗಳ ಮೂಲಕ ಹತ್ಯೆಯ ರಹಸ್ಯ ಪತ್ತೆ

ಬೆಂಗಳೂರು: ವಾಟ್ಸಪ್‍ಗೆ ಗೆಳತಿ ವರ್ಷಿಣಿ ಕಳುಹಿಸಿದ ಫೋಟೋ ನೋಡಿ ಹೋಟೆಲ್‍ನಿಂದ ಹೊರ ಬಂದು ರೌಡಿ ಲಕ್ಷ್ಮಣ್ ಕೊಲೆಯಾಗಿದ್ದಾನೆ.

ವರ್ಷಿಣಿ ಬೆಂಗಳೂರಿನಲ್ಲಿದ್ದಾಳೆ ಎಂದು ತಿಳಿದು ಲಕ್ಷ್ಮಣ ಆರ್.ಜಿ.ರಾಯಲ್ಸ್ ಹೋಟೆಲ್ ನಲ್ಲಿ ಕೊಠಡಿ ಬುಕ್ ಮಾಡಿದ್ದ. ಕೊಠಡಿ ಬುಕ್ ಮಾಡಿದ ಬಳಿಕ ವರ್ಷಿಣಿ ಬಾರದೇ ಇರುವುದನ್ನು ಕಂಡು ವಾಟ್ಸಪ್ ಮೂಲಕ ಕರೆ ಮಾಡಿದ್ದಾನೆ.

ಈ ಸಮಯದಲ್ಲಿ ವರ್ಷಿಣಿ ಇಸ್ಕಾನ್ ಎದುರಿನ ಟೊಯೋಟಾ ಶೋರೂಂ ಬಳಿ ಇದ್ದೇನೆ. ಈ ಸ್ಥಳಕ್ಕೆ ಬಂದು ಕರೆದುಕೊಂಡು ಹೋಗು ಎಂದು ಶೋರೂಂ ಫೋಟೋ ಕಳುಹಿಸಿದ್ದಾಳೆ. ಈ ಫೋಟೋ ನೋಡಿ ಸ್ಥಳಕ್ಕೆ ಬಂದಿದ್ದ ಲಕ್ಷ್ಮಣ ಕೆಲವೇ ಕ್ಷಣಗಳಲ್ಲಿ ಕೊಲೆಯಾಗಿ ಹೋಗಿದ್ದ.

LAXMAN copy

ಅಸಲಿಗೆ ಶೋರೂಂ ಫೋಟೋವನ್ನು ಪ್ರಿಯಕರ ರೂಪೇಶ್ ವರ್ಷಿಣಿಗೆ ಕಳುಹಿಸಿ ಕೊಲೆ ಮಾಡಲು ಸಿದ್ಧವಾಗಿದ್ದ. ಗೆಳತಿ ಶೋರೂಂ ಬಳಿ ತನಗಾಗಿ ಕಾಯುತ್ತಿದ್ದಾಳೆ ಎಂದು ತಿಳಿದು ಲಕ್ಷ್ಮಣ್ ವರ್ಷಿಣಿ ತಿಳಿಸಿದ ಸ್ಥಳಕ್ಕೆ ಬಂದಿದ್ದಾನೆ. ಶೋರೂಂ ಬಳಿ ಲಕ್ಷ್ಮಣ್ ಬಂದ ಕೂಡಲೇ ರೌಡಿಗಳು ಆತನ ಮೇಲೆ ಮುಗಿಬಿದ್ದು ಹತ್ಯೆ ಮಾಡಿದ್ದಾರೆ. ವರ್ಷಿಣಿ ಕೊಲೆಯಾದ ಮರುದಿನ ಲಂಡನ್‍ನಿಂದ ಬೆಂಗಳೂರಿಗೆ ಮರಳಿದ್ದಳು.

ರೂಮ್‍ಬುಕ್ ಏಕೆ?
ಆರೋಪಿ ವರ್ಷಿಣಿ ಹೋಟೆಲ್ ಬುಕ್ ಮಾಡು ನಿನ್ನ ಜೊತೆ ಎರಡು ದಿನ ಇರುತ್ತೇನೆ ಎಂದು ಲಕ್ಷ್ಮಣ್‍ಗೆ ಹೇಳಿದ್ದಳು. ನಮ್ಮ ಅಪ್ಪ-ಅಮ್ಮನದು ಮದುವೆ ವಾರ್ಷಿಕೋತ್ಸವ ಇದೆ. ನಿನ್ನ ಜೊತೆ ಎರಡು ದಿನ ಇದ್ದು ಬಳಿಕ ಮನೆಗೆ ಹೋಗಿ ಸರ್ಪ್ರೈಸ್ ಗಿಫ್ಟ್ ಕೊಡುತ್ತೇನೆ ಎಂದಿದ್ದಳು. ಅಷ್ಟೇ ಅಲ್ಲದೇ ಆರ್.ಆರ್.ನಗರ ಅಥವಾ ಬೆಂಗಳೂರು ಹೊರವಲಯದಲ್ಲಿ ರೂಮ್ ಮಾಡುವಂತೆ ಹೇಳಿದ್ದಳು. ಆಗ ಲಕ್ಷ್ಮಣ್ ಆ ಭಾಗದಲ್ಲಿ ನನಗೆ ಪರಿಚಯದವರು ಇದ್ದಾರೆ ಎಂದು ಅಲ್ಲಿ ರೂಮ್‍ಬುಕ್ ಮಾಡಲು ಒಪ್ಪಲಿಲ್ಲ. ಕೊನೆಗೆ ಮಾರ್ಚ್ 6ರಂದು ಆರ್.ಜಿ ರಾಯಲ್ಸ್ ಹೋಟೆಲ್‍ಗೆ ಲಕ್ಷ್ಮಣ್ ಹೋಗಿದ್ದಾನೆ. ಆದರೆ ಅಂದು ರೂಮ್ ಸಿಗದೇ ಇದ್ದ ಕಾರಣ ವಾಪಸ್ ಹೋಗಿದ್ದಾನೆ. ಬಳಿಕ ಮಾರನೇ ದಿನ ಬಂದು ರೂಮ್ ಬುಕ್ ಮಾಡಿ ಹೋಟೆಲ್‍ನಲ್ಲೇ ಉಳಿದುಕೊಂಡಿದ್ದ.

CCB ROWDY LASHMAN 1

ಆರೋಪಿಗಳು ತಪ್ಪೊಪ್ಪಿಗೆ:
ನಾನು 10 ಲಕ್ಷ ಹಣ ಕಳ್ಳತನ ಮಾಡಿದ್ದೇನೆ ಎಂದು ಆರೋಪಿಸಿ ನನ್ನ ಮೇಲೆ ಕೇಸ್ ದಾಖಲಿಸಿ ಲಕ್ಷ್ಮಣ್ ಜೈಲಿಗೆ ಕಳುಹಿಸಿದ್ದ. ನಂತರ ವರ್ಷಿಣಿ ವಿಚಾರಕ್ಕೆ ಪೊಲೀಸ್ ಠಾಣೆಗೆ ಬಂದು ಅವಾಜ್ ಕೂಡ ಹಾಕಿದ್ದನು. ಇದರಿಂದ ಜೈಲಿಗೆ ಹೋದಾಗ ಅಲ್ಲಿಯೇ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಸ್ಕೆಚ್ ಮಾಡಿದ್ದೆ. ಅಷ್ಟೇ ಅಲ್ಲದೆ ಲಕ್ಷ್ಮಣ್ ನಮ್ಮ ಲವ್ ಬ್ರೇಕ್ ಮಾಡಲು ಪ್ರಯತ್ನ ಮಾಡಿದ್ದನು. ನಾನು ಜೈಲಿನಿಂದ ಹೊರಗಡೆ ಬಂದಾಗ ಮತ್ತೆ ವರ್ಷಿಣಿಯ ಫೋನ್ ನಂಬರ್ ತೆಗೆದುಕೊಂಡು ಕಾಲ್ ಮಾಡಿದ್ದೆ. ಆಗ ವರ್ಷಿಣಿ ಲಂಡನ್‍ನಲ್ಲಿದ್ದಳು. ನಾನ್ ಫೋನ್ ಮಾಡಿ ಮಾತನಾಡಿದ್ದೆ.

ನಮ್ಮ ಲವ್ ಬ್ರೇಕ್‍ಅಪ್ ಆಗಿದ್ದಕ್ಕೆ ಅವಳು ಬೇಜಾರ್ ಮಾಡಿಕೊಂಡಿರಲಿಲ್ಲ. ಈ ವೇಳೆ ಅವಳು ಏನಾದರೂ ಮಾಡಿ ಲಕ್ಷ್ಮಣ್ ಗೆ ಬುದ್ಧಿ ಕಲಿಸಬೇಕು ಎಂದು ಹೇಳಿದ್ದಳು. ಅವಳಿಗೂ ಲಕ್ಷ್ಮಣನ ಮೇಲೆ ಕೋಪ ಇತ್ತು. ಅದಕ್ಕೆ ನನಗೆ ಸಪೋರ್ಟ್ ಮಾಡಿದ್ದಳು. ಇತ್ತ ನನಗೆ ಲಕ್ಷ್ಮಣ್ ಕೊಟ್ಟಿದ್ದ ಟಾರ್ಚರ್ ನಿಂದ ನಾನು ಕೊಲೆಗೆ ಸ್ಕೆಚ್ ಹಾಕಿದ್ದೆ. ನಾನು ವರ್ಷಿಣಿಗೆ ಫೋನಿನಲ್ಲೆ ಪ್ಲಾನ್ ಬಗ್ಗೆ ತಿಳಿಸಿದ್ದೆ ಎಂದು ಸಿಸಿಬಿ ಪೊಲೀಸರ ಬಳಿ ಎ1 ಆರೋಪಿ ರೂಪೇಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

vlcsnap 2019 03 13 09h23m41s237

ಕಾಲ್ ರೆಕಾರ್ಡಿಂಗ್ ಪತ್ತೆ:
ರೂಪೇಶ್ ಮತ್ತು ವರ್ಷಿಣಿ ಸಂಭಾಷಣೆಯ ಫೋನ್ ಕಾಲ್ಸ್ ಪತ್ತೆಯಾಗಿದ್ದು, ಇಬ್ಬರು ಲಕ್ಷ್ಮಣ್‍ನ ಹತ್ಯೆ ಬಗ್ಗೆ ಮಾತನಾಡಿರುವುದು ರೆಕಾರ್ಡ್ ಆಗಿದೆ. ವಾಟ್ಸಪ್ ಕಾಲ್ ಹಾಗೂ ನಾರ್ಮಲ್ ಕಾಲ್ ವಿವರಗಳ ಮೂಲಕ ಕೊಲೆಯ ರಹಸ್ಯ ಪತ್ತೆಯಾಗಿದೆ. ವರ್ಷಿಣಿಯನ್ನ ಮುಂದೆ ಬಿಟ್ಟು ಕೊಲೆ ಮಾಡಿದ್ದ ಸಂಚು ಆಡಿಯೋದಲ್ಲಿ ಬಹಿರಂಗವಾಗಿದೆ. ಸದ್ಯಕ್ಕೆ ಪೊಲೀಸರು ಕಾಲ್ ಡಿಟೇಲ್ಸ್ ಇಟ್ಟುಕೊಂಡು ತನಿಖೆ ಮುಂದುವರಿಸಿದ್ದಾರೆ .

ನಾನು ಲಂಡನ್‍ಗೆ ಬಂದ ನಂತರ ರೂಪೇಶ್ ಕರೆ ಮಾಡಿದ್ದನು. ಲಕ್ಷ್ಮಣ್ ಮುಗಿಸುವ ಬಗ್ಗೆ ಪ್ರಸ್ತಾಪಿಸಿದ್ದನು. ಲಂಡನ್‍ನಲ್ಲಿ ಇದ್ದುಕೊಂಡೆ ನಾನು ಹೇಳಿದ್ದಂತೆ ಮಾಡಬೇಕು ಎಂದಿದ್ದನು ಎಂದು ಸಿಸಿಬಿ ಮುಂದೆ ಆರೋಪಿ ವರ್ಷಿಣಿ ಕೊಲೆಗೆ ಸಹಕಾರ ನೀಡಿದ್ದಾಗಿ ಒಪ್ಪಿಕೊಂಡಿದ್ದಾಳೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *