-ನಾನು ಬಿಎಸ್‍ವೈ ಮನೆ ಮಗ
-ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ರಾಜಕೀಯ ನಿವೃತ್ತಿ
ಬೆಂಗಳೂರು: ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ನಿಜಕ್ಕೂ ನನಗೆ ಬೇಸರ ಇದೆ, ಇದನ್ನು ನಾನು ಓಪನ್ ಆಗಿ ಹೇಳುತ್ತೇನೆ. ಯಾರು ಏನು ಬೇಕಾದರೂ ತಿಳಿದುಕೊಳ್ಳಲಿ. ಹಾಗೇನಾದರೂ ಕಷ್ಟ ಎದುರಾದಲ್ಲಿ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದರು.
ಈ ಕುರಿತು ಶಾಸಕರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಹಂಚಿಕೆ ಕುರಿತು ನನಗೆ ಅಸಮಾಧಾನವಿದೆ. ಗೆದ್ದವರಿಗೆ ಸಚಿವ ಸ್ಥಾನ ಕೊಡುವುದನ್ನು ಬಿಟ್ಟು ಸೋತವರಿಗೇಕೆ ನೀಡಿದ್ದಾರೆ. ಈಗ ಬಂದು ನಾಟಕ ಮಾಡೋದು ನನಗೆ ಇಷ್ಟವಿಲ್ಲ. ಹಲವಾರು ಜನ ಗೆದ್ದವರಿದ್ದಾರೆ. ಬೆಳಗಾವಿ ಭಾಗದ ಹಿರಿಯ ನಾಯಕರಾಗಿರುವ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಡಬಹುದಿತ್ತು. ಆದರೆ, ಸೋತಿರುವ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಸಾಕಷ್ಟು ಜನರಿಗೆ ಬೇಸರ ತಂದಿದೆ. ಗೆದ್ದವರಿಗೆ ಕೊಟ್ಟಿದ್ದರೆ ಗೌರವ ಇರುತಿತ್ತು. ನಾನು ಯಾವುದೇ ಕಾರಣಕ್ಕೂ ಬಂಡಾಯ ಏಳುವುದಿಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾದಲ್ಲಿ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದರು.
Advertisement
Advertisement
ನಾನು ಯಾರನ್ನೂ ಭೇಟಿಯಾಗಿಲ್ಲ, ನನ್ನ ಕೊನೆಯ ಉಸಿರು ಇರುವವರೆಗೂ ರಾಜಕೀಯವಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನ ಭೇಟಿಯಾಗಲ್ಲ. ಹೆಚ್‍ಡಿಕೆ ನಡೆ, ನಮ್ಮ ನಡೆ ಬೇರೆಯಾಗಿವೆ. ಸಿಎಂ ಯಡಿಯೂರಪ್ಪನವರು ರಾಜಕೀಯದಲ್ಲಿ ಇರುವವರೆಗೆ ನಾನೂ ಇರುತ್ತೇನೆ, ನಾನು ಯಡಿಯೂರಪ್ಪ ಮನೆಯ ಮಗ ಎಂದು ಶಾಸಕ ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
Advertisement
ಕೊನೆಯ ಉಸಿರು ಇರುವವರೆಗೂ ನಾನು ಬೇರೆ ಯಾವ ಪಕ್ಷಕ್ಕೂ ಹೋಗಲ್ಲ. ಸಚಿವ ಸ್ಥಾನ ಕೊಡಲಿ, ಕೊಡದಿರಲಿ ನಾನು ಯಡಿಯೂರಪ್ಪನವರ ಜೊತೆಗೆ ಇರುತ್ತೇನೆ. ಸಚಿವ ಸ್ಥಾನಕ್ಕೆ ನಾನು ಯಾವುದೇ ಲಾಬಿ ಮಾಡಿಲ್ಲ. ಕೆಲವರಿಗೆ ಅಸಮಾಧಾನ ಇರುವುದು ನಿಜ. ಆದರೆ ಯಾವುದೇ ಗುಪ್ತ ಸಭೆಗಳನ್ನು ಮಾಡಿಲ್ಲ, ಅದರ ಅವಶ್ಯಕತೆಯೂ ನನಗೆ ಇಲ್ಲ ಎಂದು ತಿಳಿಸಿದರು.