ಜೀವ ಮತ್ತು ಜೀವನ ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ: ಡಿಸಿಎಂ ಲಕ್ಷ್ಮಣ್ ಸವದಿ

Public TV
2 Min Read
savadi

ರಾಯಚೂರು: ಜನಪ್ರತಿನಿಧಿಗಳು ಜಾತಿ, ರಾಜಕೀಯ ಬಿಟ್ಟು ನಿಜವಾಗಿ ಕಷ್ಟದಲ್ಲಿರುವವರಿಗೆ ಸ್ಪಂದಿಸಬೇಕಿದೆ. ಎಲ್ಲವೂ ಸರ್ಕಾರದಿಂದ ಸಾಧ್ಯವಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಜೀವ ಮತ್ತು ಜೀವನ ಉಳಿಸಲು ಹಾಗೂ ಉಳಿಸಿಕೊಳ್ಳಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಕರೆ ನೀಡಿದ್ದಾರೆ.

ರಾಯಚೂರು ಜಲ್ಲೆಯಲ್ಲಿ ಡಿಸಿಎಂ ಅಕಾಲಿಕ ಮಳೆಯಿಂದಾಗಿ ಹಾನಿಯಾದ ಬೆಳೆ ವೀಕ್ಷಣೆ ಮಾಡಿದರೆ. ಬಳಿಕ ನಗರದ ಜಿ.ಪಂ ಸಭಾಂಗಣದಲ್ಲಿ ನಡೆದ ಕೊರೊನಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಹಸಿರು ವಲಯದಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಕೊರೊನಾ ಸೋಂಕು ಜಿಲ್ಲೆಗೆ ತಗುಲದಂತೆ ನೋಡಿಕೊಳ್ಳಬೇಕಿದೆ. ಆಂಧ್ರಪ್ರದೇಶ, ತೆಲಂಗಾಣದಿಂದ ಭತ್ತ ತರುವುದು ಆತಂಕಕ್ಕೆ ಕಾರಣವಾಗಿದೆ. ಭತ್ತದ ಚೀಲಗಳ ಮೂಲಕ ರಾಯಚೂರಿಗೆ ಕೊರೊನಾ ಸೋಂಕು ಬರಬಾರದು. ಹೀಗಾಗಿ ರಾಯಚೂರು ಜಿಲ್ಲಾಡಳಿತ ಇನ್ನೂ ಎಚ್ಚರಿಕೆಯಿಂದ ಇರಬೇಕು. ಮೈಮರೆಯದೆ ಜಾಗೃತಿಯಿಂದ ಇರಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಲಾಕ್‍ಡೌನ್ ಇದಿಯೋ ಇಲ್ಲವೋ ಅನ್ನೋ ಪರಸ್ಥಿತಿ ಜಿಲ್ಲೆಯಲ್ಲಿ ಇರಬಾರದು ಎಂದು ಎಚ್ಚರಿಸಿದರು.

savadi meeting

ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜಾಗೃತಿಯಿದೆ. ಸರ್ಕಾರದಿಂದಲೇ ಎಲ್ಲವೂ ಸಾಧ್ಯವಿಲ್ಲ, ಜನರು ಕೂಡ ಸಹಕರಿಸಬೇಕಿದೆ. ಉತ್ತರ ಪ್ರದೇಶ ಹಾಗೂ ಕೇರಳದ ಆಯ್ದ ಅಂಶಗಳ ಹೊಸ ಕಾನೂನುನಲ್ಲಿ ರಾಜ್ಯದಲ್ಲಿ ಜಾರಿಗೆ ತಂದಿದ್ದೇವೆ. ಇದರಿಂದ ಈಗ ಪೊಲೀಸರಿಗೆ ಕೆಲಸ ಮಾಡಲು ಹೊಸ ಆಸರೆ ಸಿಗಲಿದೆ. ಬೇರೆ ಜಿಲ್ಲೆಗಳ ಕೂಲಿಕಾರ್ಮಿಕರನ್ನ ಕರೆತರಲಾಗುತ್ತಿದೆ. ಬೇರೆ ರಾಜ್ಯಗಳಲ್ಲಿನ ಕೂಲಿಕಾರ್ಮಿಕರನ್ನ ಕರೆತರಲು ಚರ್ಚೆ ನಡೆದಿದೆ ಎಂದರು.

ಕುಡಿಯುವ ನೀರಿನ ಸಮಸ್ಯೆಗೆ 25 ಲಕ್ಷ ಸಾಲುವುದಿಲ್ಲ. ಟಾಸ್ಕ್ ಫೋರ್ಸ್‍ಗೆ ಹೆಚ್ಚು ಅನುದಾನ ಕೊಡಬೇಕು ಅಂತ ಶಾಸಕರಾದ ಶಿವನಗೌಡ ನಾಯಕ್, ಬಸನಗೌಡ ದದ್ದಲ ಸಭೆಯಲ್ಲಿ ಬೇಡಿಕೆ ಇಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ನಿಮ್ಮ ಕ್ಷೇತ್ರಗಳಿಗೆ ಬೇಕಿರುವ ಅನುದಾನದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಬಿಡುಗಡೆ ಮಾಡೋಣ ಎಂದರು. ಈಗ ಕೊಟ್ಟಿರುವ ಪಡಿತರ ಜನರಿಗೆ ಮೂರು ತಿಂಗಳು ಸಾಲುತ್ತೆ. ಅಕ್ಕಿ ಜೊತೆ ಇತರೆ ಅಡುಗೆ ಪದಾರ್ಥಗಳನ್ನ ಕೊಡುವ ಬಗ್ಗೆ ಯೋಚಿಸುತ್ತೇವೆ ಎಂದರು.

savadi 3

ಇದೇ ವೇಳೆ ಲಾಕ್‍ಡೌನ್‍ನಿಂದ ಮದ್ಯದ ಅಂಗಡಿಗಳು ಬಂದ್ ಆಗಿರುವ ಹಿನ್ನೆಲೆ ಅಕ್ರಮ ಮದ್ಯ, ಕಳ್ಳಭಟ್ಟಿ, ಅಕ್ರಮ ಸಿಎಚ್ ಪೌಡರ್, ಸೇಂದಿ ಮಾರಾಟ ಜೋರಾಗಿದೆ ಅಂತ ಅಬಕಾರಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ತೆಲಂಗಾಣ ಗಡಿಯಿಂದ ಬರುತ್ತಿರುವ ಸಿಎಚ್ ಪೌಡರ್, ಅಕ್ರಮ ಮದ್ಯದ ದಂಧೆ ಸಂಪೂರ್ಣ ನಿಲ್ಲಬೇಕು. ಕಳ್ಳಭಟ್ಟಿ ದಂಧೆ ಮಾಡುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತೆ. ಬಾರ್ ಮಾಲೀಕರೇ ತಮ್ಮ ಬಾರ್ ಕಳ್ಳತನ ಮಾಡಿಸುತ್ತಿರುವ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಅಬಕಾರಿ ಡಿಸಿಗೆ ಡಿಸಿಎಂ ಎಚ್ಚರಿಕೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *