– ಕರ್ನಾಟಕಕ್ಕೆ ಶುಭ ಸುದ್ದಿ ಕಾದಿದೆ
ಧಾರವಾಢ: ಕರ್ನಾಟಕ ಮತ್ತು ಗೋವಾ ಸುಪ್ರಿಂ ಕೋರ್ಟ್ ಮೊರೆ ಹೋದ ಕಾರಣ ನೋಟಿಫಿಕೇಷನ್ ವಿಳಂಬವಾಗುತ್ತಿದೆ. ಆದರೆ ರಾಜ್ಯಕ್ಕೆ ಶುಭ ಸುದ್ದಿ ಕಾದಿದೆ ಎಂದು ಸುಪ್ರಿಂ ಕೋರ್ಟ್‍ನಲ್ಲಿರುವ ರಾಜ್ಯದ ಪರ ವಕೀಲ ಮೋಹನ್ ಕಾತರಕಿ ತಿಳಿಸಿದ್ದಾರೆ.
ನಗರದಲ್ಲಿ ಈ ಕುರಿತು ಪ್ರತಿಕ್ರಯಿಸಿದ ಅವರು, ಕರ್ನಾಟಕ ಮತ್ತು ಗೋವಾ ಸುಪ್ರಿಂ ಕೋರ್ಟ್ ಮೊರೆ ಹೋದ ಕಾರಣ ನೋಟಿಫಿಕೇಷನ್ ವಿಳಂಬ ಆಗುತ್ತಿದೆ. ಮಹದಾಯಿ ನ್ಯಾಯಾಧೀಕರಣ ತನ್ನ ತೀರ್ಪು ಕೊಟ್ಟಿದೆ. ಕರ್ನಾಟಕಕ್ಕೆ ಈಗ ಬೇಕಾಗುವಷ್ಟು ನೀರು ನ್ಯಾಯಾಧೀಕರಣ ಕೊಟ್ಟಿದೆ. ಆದರೆ ನಾವು ಹೆಚ್ಚುವರಿ ನೀರಿಗಾಗಿ ಸುಪ್ರಿಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದೇವೆ. ಗೋವಾದವರು ಸಹ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ನೋಟಿಫಿಕೇಷನ್ ತಡವಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸುಪ್ರಿಂ ಕೋರ್ಟ್‍ಗೆ ಹೋಗಿದ್ದರಿಂದ ವಿಷಯ ಕೋರ್ಟ್ ಹಂತದಲ್ಲಿದೆ. ಅಲ್ಲದೆ ಗೋವಾದವರು ನ್ಯಾಯಾಧೀಕರಣದ ಬಗ್ಗೆಯೇ ಕೆಲ ಪ್ರಶ್ನೆ ಕೇಳಿದ್ದಾರೆ. ಇದು ಇತ್ಯರ್ಥ ಆಗಬೇಕಿದೆ, ಹೀಗಾಗಿ ಗೆಜೆಟ್ ನೊಟೀಫಿಕೇಷನ್ ಆಗುತ್ತಿಲ್ಲ. ಆದರೆ ಕರ್ನಾಟಕಕ್ಕೆ ಒಂದು ಶುಭ ಸುದ್ದಿ ಕಾದಿದೆ ಎಂದು ಇದೇ ವೇಳೆ ವಿವರಿಸಿದರು.
ಗಜೆಟ್ ನೊಟೀಫಿಕೇಷನ್ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರ ಹೊಸ ಕಾಯಿದೆಯೊಂದನ್ನು ತರಲು ಮುಂದಾಗಿದೆ. ಈ ಕಾಯಿದೆ ಜಾರಿಗೆ ಬಂದರೆ ಶೀಘ್ರವೇ ನೋಟಿಫಿಕೇಷನ್ ಆಗುತ್ತದೆ. ಈಗಾಗಲೇ ಈ ಕಾಯಿದೆ ಲೋಕಸಭೆಯಲ್ಲಿ ಪಾಸ್ ಆಗಿದೆ. ಡಿಸೆಂಬರ್‍ನಲ್ಲಿ ರಾಜ್ಯಸಭೆಯಲ್ಲಿ ಈ ಕಾಯಿದೆ ಪಾಸ್ ಆಗಲಿದೆ. ಈ ನೂತನ ಕಾಯಿದೆ ಜಾರಿಗೆ ಬಂದರೆ ನ್ಯಾಯಾಧೀಕರಣ ತೀರ್ಪನ್ನು ಗೆಜೆಟ್ ನೋಟಿಫಿಕೇಷನ್ ಇಲ್ಲದೆಯೇ ಜಾರಿ ಮಾಡಬಹುದು ಎಂದರು.
ಅಲ್ಲದೆ ಎಂದು ನ್ಯಾಯಧೀಕರಣದಲ್ಲಿ ತೀರ್ಪು ಬರುತ್ತದೆಯೋ ಅಂದೇ ಆ ತೀರ್ಪು ಜಾರಿಗೆ ಬರುತ್ತದೆ. ಈ ಕಾಯಿದೆ ಡಿಸೆಂಬರ್‍ನಲ್ಲಿ ಪಾಸ್ ಆದರೆ ನಮ್ಮ ಮಹದಾಯಿಗೆ ಯಾವುದೇ ಅಡ್ಡಿ ಬರುವುದಿಲ್ಲ. ನ್ಯಾಯಾಧೀಕರಣದ ತೀರ್ಪಿನಂತೆ ಸರಳವಾಗಿ ನೀರು ಪಡೆಯಬಹುದು ಎಂದು ತಿಳಿಸಿದರು.