ಹಾಸನ: ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ವಕೀಲರೊಬ್ಬರು ನ್ಯಾಯಾಲಯ ಮೆಟ್ಟಿಲೇರಿದ್ದರು. ಸದ್ಯ ಈ ಪ್ರಕರಣ ಮತ್ತೆ ಚರ್ಚೆಗೆ ಬಂದಿದ್ದು, ಇದೇ ವಿಚಾರವಾಗಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಕೀಲ ದೇವರಾಜೇಗೌಡರ ನಡುವೆ ಪರಸ್ಪರ ಕೆಸರೆರೆಚಾಟಕ್ಕೆ ಕಾರಣವಾಗಿದೆ.
ನಗರದಲ್ಲಿ ಸೋಮವಾರ ಮಾತನಾಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರು, ಯಾರೋ ಒಬ್ಬ ಏನೋ ಸುಳ್ಳು ಹೇಳಿದ್ದ. ಅದನ್ನು ಮಾಧ್ಯಮದವರು ತೋರಿಸಿದ್ದರು. ಮೂರು ತಿಂಗಳಲ್ಲಿ ಪ್ರಜ್ವಲ್ ಸ್ಥಾನ ಕಿತ್ತು ಹಾಕುತ್ತೇನೆ ಎಂದು ಹೇಳಿದವನು ಈಗ ಪತ್ತೇನೆ ಇಲ್ಲ. ಎಲ್ಲೋ ಓಡಿ ಹೋಗಿದ್ದಾನೆ ಎಂದು ಕಿಡಿಕಾರಿದ್ದರು.
Advertisement
Advertisement
ಜನರು ನನ್ನನ್ನು 1 ಲಕ್ಷದ 41 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ನಾನು ಜನರ ಪರ ಕೆಲಸ ಮಾಡುತ್ತೇನೆ. ಇಂತಹ ಆರೋಪಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಿಲ್ಲ. ನ್ಯಾಯಾಲಯದಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಿ ವೈಯಕ್ತಿಕ ಇಮೇಜ್ ಬೆಳೆಸಿಕೊಳ್ಳಲು ಮುಂದಾಗಿದ್ದಾರೆ ಅಷ್ಟೇ ಎಂದು ಹೇಳಿದ್ದರು. ಅಲ್ಲದೇ ಸಂಸದರ ಸಭೆಗೆ ಗೈರು ಹಾಜರಿ ಆಗಿದ್ದ ಅಧಿಕಾರಿಗಳ ವಿರುದ್ಧವೂ ಬೇಸರ ವ್ಯಕ್ತಪಡಿಸಿದ್ದರು.
Advertisement
ಪ್ರಜ್ವಲ್ ರೇವಣ್ಣ ಅವರ ಹೇಳಿಕೆಗೆ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿರುವ ವಕೀಲ ದೇವರಾಜೇಗೌಡ ಅವರು, 5 ಬಾರಿ ನ್ಯಾಯಾಲಯದಿಂದ ಸಮನ್ಸ್ ಆದಾಗ ಸಂಸದರಾದ ತಾವು ಊರು ಬಿಟ್ಟು ಓಡಿ ಹೋಗಿದ್ರಿ. ಪೇಪರ್ ಪಬ್ಲಿಕೇಷನ್ ಹಾಕಿದ ನಂತರ ನೀವು ಆಗಮಿಸಿದ್ರಿ. ಪೇಪರ್ ಪಬ್ಲಿಕೇಷನ್ ಹಾಕೋದು ಕದ್ದು ಹೋಗುವವರಿಗೆ. ದಾಖಲೆ ಸಮೇತ ನಾನು ಕೇಸ್ ಹಾಕಿದ್ದೇನೆ. ನಾನು ಎಲ್ಲೂ ಹೋಗಲ್ಲ, ನಾನು ರಣಹೇಡಿಯಲ್ಲ. ನಾನೊಬ್ಬ ಹೀರೋ. ಕದ್ದು ಹೋದವರು ನೀವು. ಅತೀ ಶೀಘ್ರದಲ್ಲೇ ಜಿಲ್ಲೆಗೆ ಹೊಸ ಸಂಸದರು ಬರುತ್ತಾರೆ ಎಂದು ಸವಾಲು ಹಾಕಿದ್ದಾರೆ.