ನವದೆಹಲಿ: ಭ್ರಷ್ಟಾಚಾರ ನಿಯಂತ್ರಣ (ಪಿಸಿ) ಕಾಯಿದೆಯ ಸೆಕ್ಷನ್ 17Aಯ ಸಾಂವಿಧಾನಿಕ ಸಿಂಧುತ್ವ ಕುರಿತು ಸುಪ್ರೀಂ ಕೋರ್ಟ್ (Supreme Court) ವಿಭಜಿತ ತೀರ್ಪು ನೀಡಿದೆ. ಈ ನಿಬಂಧನೆಯು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಅಪರಾಧಗಳ ತನಿಖೆಗೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಪೂರ್ವಾನುಮತಿ ಕಡ್ಡಾಯಗೊಳಿಸುತ್ತದೆ.
2018ರಲ್ಲಿ ಜಾರಿಗೆ ತರಲಾದ ಈ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಬಿ.ವಿ. ನಾಗರತ್ನ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಭಿನ್ನ ತೀರ್ಪು ನೀಡಿತು. ವಿಭಜಿತ ತೀರ್ಪಿನ ಕಾರಣದಿಂದಾಗಿ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗೆ ಕಳುಹಿಸಿ, ಸೂಕ್ತ ದೊಡ್ಡ ಪೀಠಕ್ಕೆ ಹಸ್ತಾಂತರಿಸುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆ; ಡಿಜಿಎಂಓಗಳ ಸಭೆಯಲ್ಲಿ ಪಾಕ್‌ಗೆ ಖಡಕ್ ಎಚ್ಚರಿಕೆ
ಸೆಕ್ಷನ್ 17A ಅಸಾಂವಿಧಾನಿಕ ಮತ್ತು ಅನ್ಯಾಯಯುತ ಎಂದು ನ್ಯಾ. ಬಿವಿ ನಾಗರತ್ನ ಘೋಷಿಸಿದರು. ಇದು ಕಾಯಿದೆಯ ಉದ್ದೇಶಕ್ಕೆ ವಿರುದ್ಧವಾಗಿದ್ದು, ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವ ಪ್ರಯತ್ನವೆಂದು ಹೇಳಿದರು. ಮುಂಚಿನ ತನಿಖೆಯನ್ನು ತಡೆಯುತ್ತದೆ, ದೂರುಗಳನ್ನು ತಿರಸ್ಕರಿಸುವಂತೆ ಮಾಡುತ್ತದೆ ಮತ್ತು ಭ್ರಷ್ಟಾಚಾರ ನಿಯಂತ್ರಣವನ್ನು ದುರ್ಬಲಗೊಳಿಸುತ್ತದೆ. ಫ್ರಿವಲಸ್ ದೂರುಗಳನ್ನು ಸೆಕ್ಷನ್ 19ರಡಿ ನಿಭಾಯಿಸಬಹುದು. ಆದರೆ ತನಿಖೆಯನ್ನೇ ತಡೆಯುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ಭಿನ್ನ ತೀರ್ಪು ನೀಡಿದ ನ್ಯಾ. ಕೆ.ವಿ. ವಿಶ್ವನಾಥನ್, ಸೆಕ್ಷನ್ 17A ಸಾಂವಿಧಾನಿಕವಾಗಿ ಮಾನ್ಯ ಎಂದು ಹೇಳಿದರು. ಇದು ಪ್ರಾಮಾಣಿಕ ಅಧಿಕಾರಿಗಳನ್ನು ರಕ್ಷಿಸುವ ಸ್ಕ್ರೀನಿಂಗ್ ವ್ಯವಸ್ಥೆಯಾಗಿದ್ದು, ದುರ್ಬಳಕೆಯ ಸಾಧ್ಯತೆಯನ್ನು ಆಧರಿಸಿ ಅಸಿಂಧುಗೊಳಿಸುವುದು ಸರಿಯಲ್ಲ ಎಂದರು. ಸಾಮಾಜಿಕ ಮಾಧ್ಯಮ ಯುಗದಲ್ಲಿ ಅಧಿಕಾರಿಗಳ ಮಾನಹಾನಿ ತಪ್ಪಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಸರ್ಕಾರದ ಅನುಮತಿಗೆ ಬದಲು ದೂರುಗಳನ್ನು ಲೋಕಪಾಲ್ ಅಥವಾ ಲೋಕಾಯುಕ್ತಕ್ಕೆ ಕಳುಹಿಸಿ, ಸ್ವತಂತ್ರ ತನಿಖೆ ಮಾಡುವಂತೆ ಸೂಚಿಸಿದರು. ಇದನ್ನೂ ಓದಿ: 10 ನಿಮಿಷದಲ್ಲಿ ಡೆಲಿವರಿ ಭರವಸೆಗೆ ಬ್ರೇಕ್ ಹಾಕಿದ ಕೇಂದ್ರ; ಜಾಹೀರಾತು ನಿಲ್ಲಿಸುವ ಭರವಸೆ ನೀಡಿದ ಝೆಪ್ಟೋ, ಸ್ವಿಗ್ಗಿ, ಜೊಮ್ಯಾಟೊ, ಬ್ಲಿಂಕಿಟ್

