ರಾಮನಗರ: ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪರವಾಗಿ ಒಕ್ಕಲಿಗ ಸಂಘ ಸಂಸ್ಥೆಗಳು ನಡೆಸಿದ್ದ ಪ್ರತಿಭಟನೆಯಲ್ಲಿ ನಾವು ಪಾಲ್ಗೊಳ್ಳಬೇಕು ಎಂದೇನಿಲ್ಲ. ವೈಯಕ್ತಿಕವಾಗಿ ಮನೆಗೆ ಹೋಗಿ ಅವರ ಪತ್ನಿ, ಮಕ್ಕಳು, ತಾಯಿಗೆ ಸಾಂತ್ವನ ಹೇಳಿದ್ದೇವೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ರಾಮನಗರದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ. ಡಿಕೆಶಿ ಇದನ್ನೆಲ್ಲಾ ಎದುರಿಸಬೇಕಾಗುತ್ತದೆ. ಡಿಕೆಶಿ ಮನೆಗೆ ಕುಮಾರಸ್ವಾಮಿಯವರು ಹೋಗಿ ಅವರ ತಾಯಿಗೆ ಧೈರ್ಯವನ್ನು ಹೇಳಿ ಬಂದಿದ್ದಾರೆ. ನಾನೂ ಕೂಡಾ ಮನೆಗೆ ಹೋಗಿ ಅವರ ಪತ್ನಿ, ಮಕ್ಕಳಿಗೆ ಸಾಂತ್ವನ ಹೇಳಿದ್ದೇನೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಅಂತೇನೂ ಇಲ್ಲ ಎಂದು ತಿರುಗೇಟು ನೀಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ್ದನ್ನೇ ವಿರೋಧಿಗಳು ದೊಡ್ಡದಾಗಿ ಪ್ರಚಾರ ಮಾಡುತ್ತಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ಪ್ರತಿಯೊಬ್ಬರೂ ಅಷ್ಟೇ ಏನೇ ಪ್ರತಿಭಟನೆ ಮಾಡಲಿ, ಏನೇ ಮಾಡಿದರೂ ಕಾನೂನು ಏನಿದ್ಯೋ ಅದು ಆಗುತ್ತದೆ. ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಆಹ್ವಾನ ನೀಡಿ ಕರೆಯೋದಕ್ಕೆ ಅದೇನು ಬೀಗರ ಔತಣ ಕೂಟನಾ ಎಂಬ ಚಲುವರಾಯಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಮಾತುಗಳಿಗೆಲ್ಲ ನಾವು ಉತ್ತರ ಕೊಡಲು ಸಾಧ್ಯವಿಲ್ಲ. ವಿರೋಧಿಗಳು ಮಾತನಾಡುತ್ತಾರೆ ಎಂದು ಪ್ರತಿಕ್ರಿಯಿಸಲು ನಿರಾಕರಿಸಿದರು.
ಬಿಜೆಪಿ ಸರ್ಕಾರದಿಂದ ಸ್ವಕ್ಷೇತ್ರದ ಅಭಿವೃದ್ಧಿಗೆ ಹಿನ್ನಡೆಯಾಗಿಲ್ಲ. ಯಾವುದೇ ಸರ್ಕಾರ ಬಂದರೂ ಸೆಟ್ಲ್ ಆಗೋದಕ್ಕೇ ಸ್ವಲ್ಪ ಸಮಯ ಬೇಕು. ಜೆಡಿಎಸ್ ಶಾಸಕರು ಬೇರೆ ಪಕ್ಷಕ್ಕೆ ಹೋಗುವುದೆಲ್ಲ ಸುಳ್ಳು. ನಿಮಗೆ ಎಲ್ಲಿಂದ ಮಾಹಿತಿ ಬರುತ್ತೋ ಗೊತ್ತಿಲ್ಲ. ಕೆ.ಆರ್.ಪೇಟೆಯ ನಾರಾಯಣ ಗೌಡ ಹೋಗಿದ್ದಾಗಿದೆ ಅವರ ವಿಷಯ ಬೇಡ. ಬೇರೆ ಇನ್ಯಾವ ಶಾಸಕರು ಕೂಡ ಬಿಜೆಪಿಗೆ ಹೋಗಲ್ಲ. ಹೋಗಿರುವ ಅನರ್ಹ ಶಾಸಕರೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ ಎಂದು ಹರಿಹಾಯ್ದರು.
ಅವರು ಆಸೆ ಪಟ್ಟಂತಹ ರೀತಿ ಆಗುತ್ತಿಲ್ಲ. ಅವರ ಪರಿಸ್ಥಿತಿ ನೋಡಿ ಹೋಗುವಂತಹ ಸಾಹಸ ಯಾರೂ ಮಾಡಲ್ಲ, ಹೀಗಾಗಿ ನಮ್ಮ ಶಾಸಕರು ಹೋಗಲ್ಲ. ಜಿ.ಟಿ.ದೇವೇಗೌಡರು ಅವರ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗಾಗಿ ಸಿಎಂ ಭೇಟಿ ಮಾಡ್ತಾರೆ. ವಿರೋಧ ಪಕ್ಷದ ಶಾಸಕರು ಮುಖ್ಯಮಂತ್ರಿಗಳನ್ನು ಭೇಟಿ ಮಾಡೋದು ತಪ್ಪಲ್ಲ. ನನ್ನ ಕ್ಷೇತ್ರದ ಕೆಲಸಗಳಿಗೆ ಸಿಎಂ ಭೇಟಿ ಅವಶ್ಯವಿದ್ದಲ್ಲಿ ನಾನೂ ಭೇಟಿ ಮಾಡುತ್ತೇನೆ. ಜಿಟಿಡಿ, ಸಾರಾ ಮಹೇಶರಲ್ಲಿ ಕೆಲವು ಅಸಮಧಾನವಿದೆ, ಮನಸ್ತಾಪವಿದೆ. ಅದಕ್ಕೂ ಕುಮಾರಸ್ವಾಮಿಗೂ ಸಂಬಂಧವಿಲ್ಲ, ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಂಡಿದ್ದಾರೆ. ಎಲ್ಲ ಪಕ್ಷದಲ್ಲೂ ಸಣ್ಣಪುಟ್ಟ ಗೊಂದಲಗಳು ಇದ್ದೇ ಇವೆ. ಇವೇನು ಸರಿಪಡಿಸಲಾಗದ ತಪ್ಪುಗಳೇನಲ್ಲ ಎಂದು ಸ್ಪಷ್ಟಪಡಿಸಿದರು.