-ನ್ಯಾಯದೇವತೆಯ ಕೈಯಲ್ಲಿ ಖಡ್ಗದ ಬದಲು ಸಂವಿಧಾನ
ನವದೆಹಲಿ: ಭಾರತದ ನ್ಯಾಯಾಲಯಗಳಲ್ಲಿ ಇರುವ ನ್ಯಾಯದೇವತೆಯ (Justice Statue) ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ನ (Supreme Court) ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ (Chief Justice DY Chandrachud) ಆದೇಶಿಸಿದ್ದಾರೆ.
ನ್ಯಾಯದೇವತೆ ಯಾರನ್ನೂ ಎಂದಿಗೂ ಬೇಧ ಭಾವ ಮಾಡದಂತೆ ಕಣ್ಣಿಗೆ ಪಟ್ಟಿ ಕಟ್ಟಲಾಗುತ್ತಿತ್ತು. ಇದಕ್ಕೆ ಕಾರಣ ಅಂದರೆ ಬಂದ ಆರೋಪಿಗಳಲ್ಲಿ ಬಡವ ಶ್ರೀಮಂತ ಎಂಬುದು ಕಾಣದಂತೆ ಎಂಬ ಅರ್ಥದಲ್ಲಿ ಇದನ್ನು ನಡೆಸಿಕೊಂಡು ಬರಲಾಗಿತ್ತು. ಇದೀಗ ಸಿಜೆಐ ಆದೇಶದಂತೆ ಕಣ್ಣಿಗೆ ಕಟ್ಟಲಾದ ಬಟ್ಟೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ತೆರೆಯಲಾಗಿದೆ. ಇಷ್ಟೇ ಅಲ್ಲದೇ ನ್ಯಾಯದೇವತೆಯ ಕೈಯಲ್ಲಿದ್ದ ಖಡ್ಗದ ಬದಲು ಭಾರತದ ಸಂವಿಧಾನ ನೀಡಲು ಸಿಜೆಐ ಸೂಚಿಸಿದ್ದಾರೆ. ಆದೇಶದಂತೆ ಈಗಾಗಲೇ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಹೊಸ ನ್ಯಾಯದೇವತೆಯ ಮೂರ್ತಿ ಅನಾವರಣ ಮಾಡಲಾಗಿದೆ.
ಭಾರತೀಯ ದಂಡ ಸಂಹಿತೆಯಂತಹ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಭಾರತೀಯ ನ್ಯಾಯ ಸಂಹಿತೆಯಾಗಿ ಬದಲಿಸುವ ಮೂಲಕ ಕಾನೂನು ವ್ಯವಸ್ಥೆಯಲ್ಲಿ ವಸಾಹತುಶಾಹಿ ಪರಂಪರೆಯನ್ನು ಈ ಹಿಂದೆ ಕೈಬಿಡಲಾಗಿತ್ತು.
ನ್ಯಾಯದೇವತೆಯ ಇತಿಹಾಸ
ನಮ್ಮ ದೇಶದ ನ್ಯಾಯದೇವತೆಯ ಮೂರ್ತಿ ಮೂಲತಃ ರೋಮ್ ಸಾಮ್ರಾಜ್ಯದ ಕಲ್ಪನೆ. ಇದು ಮೊದಲ ಬಾರಿ ಕಂಡು ಬಂದಿದ್ದು ರೋಮ್ನ ಆಗಸ್ಟಸ್ ಸಾಮ್ರಾಜ್ಯದಲ್ಲಿ. ನ್ಯಾಯದೇವತೆ ಎಂದರೆ ಲೇಡಿ ಆಫ್ ಜಸ್ಟಿಸ್ ರೋಮನ್ ಪುರಾಣಗಳಲ್ಲಿ ಬರುವ ಜಸ್ಟಿಟಿಯಾ ಎಂಬ ದೇವತೆ.
ಈ ದೇವತೆ ನ್ಯಾಯಕ್ಕೆ ಅಧಿಪತಿ, 16ನೇ ಶತಮಾನದಲ್ಲಿ ಮೊದಲ ಬಾರಿ ಈ ನ್ಯಾಯದೇವತೆಯ ಕಣ್ಣಿಗೆ ಬಟ್ಟೆಯನ್ನು ಕಟ್ಟಲಾಯಿತು. ಯಾರಿಗೂ ಕೂಡ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ, ನ್ಯಾಯದೇವತೆಯೂ ಕೂಡ ಬಂದ ಆರೋಪಿಗಳಲ್ಲಿ ಬೇಧ ಭಾವ ಎಣಿಸದಿರಲಿ ಎಂಬ ಉದ್ದೇಶದಿಂದ ಈ ರೀತಿ ನಿರ್ಧಾರ ಕೈಗೊಳ್ಳಲಾಗಿತ್ತು.
16ನೇ ಶತಮಾನದಿಂದಲೂ ನ್ಯಾಯದೇವತೆ ಇದೇ ರೀತಿ ಕಣ್ಣಿಗೆ ಪಟ್ಟಿಕಟ್ಟಿಕೊಂಡು ಹಾಗೂ ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡ ರೂಪದಲ್ಲಿಯೇ ಇದ್ದಾಳೆ. ವಿಶ್ವದ ಅನೇಕ ರಾಷ್ಟ್ರಗಳ ಕೋರ್ಟ್‌ನಲ್ಲಿ ಇದೇ ನ್ಯಾಯದೇವತೆಯನ್ನು ಕೋರ್ಟ್‌ನಲ್ಲಿ ಇಡಲಾಗಿದೆ. ಮೊಟ್ಟ ಮೊದಲ ಬಾರಿ ಈ ನ್ಯಾಯದೇವತೆಯ ಎದುರು ಕೋರ್ಟ್ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಸರು ಹನ್ಸ್ ಗೈಂಗ್. 1543ರಲ್ಲಿ ಬರ್ನ್ನಲ್ಲಿ ಈ ನ್ಯಾಯದೇವತೆಯ ಎದುರು ಮೊದಲ ವಿಚಾರಣೆ ನಡೆಸಲಾಗಿತ್ತು. ಆ ಕಾಲದಲ್ಲಿ ಬರ್ನ್, ರೋಮನ್ ಸಾಮ್ರಾಜ್ಯದ ಒಂದು ಭಾಗವಾಗಿತ್ತು.