ಬೆಂಗಳೂರು: ಕರ್ನಾಟಕದಲ್ಲಿ ಮತ್ತು ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ (JDS) ಶಾಸಕ ಭೋಜೇಗೌಡ ಪ್ರಶ್ನೆಗೆ ಉತ್ತರ ನೀಡಿದ ಅವರು, ನಮ್ಮ ಸರ್ಕಾರ ಬಂದಾಗಿನಿಂದ ಕೊಲೆಗಳ ಸಂಖ್ಯೆ ಕಡಿಮೆ ಆಗಿದೆ. ಹೀಗಾಗಿ ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಉತ್ತಮವಾಗಿದೆ ಎಂದು ಬೆನ್ನು ತಟ್ಟಿಕೊಂಡರು.ಇದನ್ನೂ ಓದಿ: MSIL ಮಳಿಗೆ ಹರಾಜು ಮೂಲಕ ಮಾರಾಟ ಇಲ್ಲ: ತಿಮ್ಮಾಪುರ್
ಬೆಂಗಳೂರಿನಲ್ಲಿ ವೀಲ್ಹಿಂಗ್ ಮಾಡುವ ಪುಂಡರ ಮೇಲೆ ಕೇಸ್ ಹಾಕಲಾಗಿದೆ. 2023ರಲ್ಲಿ 242 ಕೇಸ್ ದಾಖಲು ಮಾಡಿದ್ದು, 207 ಜನರ ಬಂಧನ ಮಾಡಲಾಗಿದೆ. 2024ರಲ್ಲಿ 532 ಕೇಸ್ ದಾಖಲು ಮಾಡಿದ್ದು, 479 ಜನರ ಬಂಧನ ಮಾಡಲಾಗಿದೆ. 2025ರಲ್ಲಿ 114 ಕೇಸ್ ದಾಖಲು ಆಗಿದ್ದು, 102 ಜನರ ಬಂಧನ ಮಾಡಲಾಗಿದೆ ಎಂದು ತಿಳಿಸಿದರು.
ಇಂತಹ ಕೇಸ್‌ಗಳು ಬಂದ ಕೂಡಲೇ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡಲು, ಪೊಲೀಸರಿಗೆ ಶಸ್ತ್ರಾಸ್ತ್ರ ಸಹಿತ ಹೊಯ್ಸಳ ಗಾಡಿ ಕೊಟ್ಟು ಕ್ರಮವಹಿಸಲಾಗ್ತಿದೆ. ಇತ್ತೀಚೆಗೆ ಎಎಸ್‌ಐಗಳಿಗೆ ಗನ್ ಕೊಡುವ ಕೆಲಸ ಮಾಡ್ತಿದ್ದೇವೆ. 24 ಗಂಟೆ ಬೀಟ್ ವ್ಯವಸ್ಥೆ ಮಾಡ್ತಿದ್ದೇವೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವವರಿಗೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಲಂಡನ್ ಮಾದರಿಯಲ್ಲಿ ಪೊಲೀಸ್ ವ್ಯವಸ್ಥೆ ಮಾಡಿದ್ದೇವೆ. ಇದಕ್ಕಾಗಿ ವಿಶೇಷ ಕಂಟ್ರೋಲ್ ರೂಂ ಮಾಡಲಾಗಿದೆ. ಕಂಟ್ರೋಲ್ ರೂಂಗೆ ಕರೆ ಮಾಡಿದ 9 ನಿಮಿಷಗಳಲ್ಲಿ ಪೊಲೀಸರು ರೀಚ್ ಆಗುತ್ತಾರೆ. ಮಹಿಳಾ ಸುರಕ್ಷತೆಗೆ ಪಿಂಕ್ ಹೊಯ್ಸಳ ಮಾಡಿದ್ದೇವೆ. ಶಾಂತಿ ಸಭೆ, ಮೊಹಲ್ಲಾಗಳಲ್ಲಿ ಸಭೆ ಮಾಡ್ತೀವಿ. ಎಫೆಕ್ಟೀವ್ ಆಗಿ ಕೆಲಸ ಮಾಡ್ತಿದ್ದೇವೆ ಎಂದರು.
ಬೆಂಗಳೂರು ಸಿಟಿಯಲ್ಲಿ ಶಾಂತಿ ಇದೆ. ಬೆಂಗಳೂರಿನಲ್ಲಿ ಶಾಂತಿ ಕಾಪಾಡುವ ಕೆಲಸ ಮಾಡ್ತಿದ್ದೇವೆ. ಒಂದೆರೆಡು ಕೇಸ್ ಆಗಿರಬಹುದು. ಯಾವುದೇ ಘಟನೆ ಆದರೂ ಕ್ರಮ ತೆಗೆದುಕೊಳ್ಳುತ್ತೇವೆ. ಬೆಂಗಳೂರಿನಲ್ಲಿ 7 ಸಾವಿರ ಸಿಸಿ ಕ್ಯಾಮರಾಗಳನ್ನು ಹಾಕಿದ್ದೇವೆ. 1,700 ಸ್ಥಳದಲ್ಲಿ ಕ್ಯಾಮರ ಹಾಕಿದ್ದೇವೆ. ಎಐ ವ್ಯವಸ್ಥೆ ಅಳವಡಿಸಿದ್ದೇವೆ ಎಂದು ಮಾಹಿತಿ ನೀಡಿದರು. ಜೊತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಇದಕ್ಕೆ ಸಾಕ್ಷಿ ಕೊಲೆ ಪ್ರಮಾಣ ಕಳೆದ ಎರಡು ವರ್ಷಗಳಿಂದ ಕಡಿಮೆ ಆಗಿರುವುದು ಎಂದರು. ಇದಕ್ಕೆ ಅಂಕಿ ಅಂಶಗಳನ್ನು ಕೊಟ್ಟ ಸಚಿವರು, 2020ರಲ್ಲಿ 1,315 ಕೊಲೆ ಕೇಸ್, 2021-1,340 ಕೇಸ್, 2022-1,366 ಕೇಸ್, 2023-1,294 ಕೇಸ್, 2024-1,208 ಕೇಸ್, 2025-100 ಕೇಸ್ ಆಗಿದೆ ಎಂದು ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಜೆಡಿಎಸ್‌ನ ಸದಸ್ಯ ಭೋಜೇಗೌಡ ಮಾತನಾಡಿ, ಬೆಂಗಳೂರಿನಲ್ಲಿ ಕಿಡಿಗೇಡಿಗಳಿಂದ, ದರೋಡೆಕೋರರಿಂದ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಈ ಬಗ್ಗೆ ಸರ್ಕಾರ ಏನು ಕ್ರಮ ತೆಗೆದುಕೊಂಡಿಲ್ಲ? ರಸ್ತೆಗಳಲ್ಲಿ ವೀಲ್ಹಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ದರೋಡೆಕೋರರು ಕೈಯಲ್ಲಿ ಚಾಕು, ಚೂರಿ, ಲಾಂಗ್ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಎಸ್‌ಸಿ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಭೋಜನ ವೆಚ್ಚ ಹೆಚ್ಚಳ ಮಾಡಲು ಪರಿಶೀಲನೆ – ಬೋಸರಾಜು