– ಸರ್ಕಾರದ 2 ವರ್ಷದ ಸಾಧನೆ, ಕಾರ್ಯಕ್ರಮಗಳಿಗೆ ಮೆಚ್ಚುಗೆ ಎಂದ ಗವರ್ನರ್
ಬೆಂಗಳೂರು: ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ, ಆರ್ಥಿಕ ಶಿಸ್ತು ಉತ್ತಮವಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawar Chand Gehlot) ಸರ್ಕಾರದ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದರು. ಎಂದಿನಂತೆ ತಮ್ಮ ಭಾಷಣದಲ್ಲಿ ರಾಜ್ಯಪಾಲರು ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ಹೊಗಳಿದರು.

ಭಾಷಣದಲ್ಲಿ ಸರ್ಕಾರದ ಆರ್ಥಿಕ ಶಿಸ್ತು, ಕಾನೂನು ಸುವ್ಯವಸ್ಥೆ ಸದೃಢವಾಗಿದೆ ಎಂದು ರಾಜ್ಯಪಾಲರಿಂದ ಹೊಗಳಿಕೆ ಪಡೆದುಕೊಳ್ಳುವ ಮೂಲಕ ವಿಪಕ್ಷಗಳಿಗೆ ಸರ್ಕಾರ ತಿರುಗೇಟು ನೀಡಿತು. ಸರ್ಕಾರ ರಾಜ್ಯಪಾಲರ ಮೂಲಕ ಭಾಷಣ ಮಾಡಿಸಿ, ತನ್ನ ಎರಡು ವರ್ಷದ ಸಾಧನೆಗಳಿಗೆ ಬೆನ್ನು ತಟ್ಟಿಸಿಕೊಂಡಿದೆ. ಸರ್ಕಾರದ ಯೋಜನೆಗಳು, ನೀತಿ ನಿರೂಪಣೆ, ಕಳೆದ ಎರಡು ವರ್ಷಗಳ ಸರ್ಕಾರದ ಹಾದಿ ಬಗ್ಗೆ ರಾಜ್ಯಪಾಲರು ಭಾಷಣದಲ್ಲಿ ಪ್ರಸ್ತಾಪಿಸಿ, ಸರ್ಕಾರ ಅಭಿವೃದ್ಧಿ ವೇಗವಾಗಿ ಸದೃಢಗೊಳಿಸಿದೆ. ಆಡಳಿತ ಅಂತಿಮವಾಗಿ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವಾಗಿ ಬಳಕೆಗೆ ಬದ್ಧವಾಗಿದೆ ಎಂದು ಘೋಷಿಸಿದ್ದಾರೆ. ಸರ್ಕಾರ ಆರ್ಥಿಕ ಶಿಸ್ತು ಕಾಯ್ದುಕೊಂಡಿದೆ, ಕಾನೂನು ಸುವ್ಯವಸ್ಥೆ ಹಾಳಾಗಿಲ್ಲ ಎಂದು ಸರ್ಕಾರಕ್ಕೆ ಬಹುಪರಾಕ್ ಹೇಳಿದರು.ಇದನ್ನೂ ಓದಿ: ವೀರಪ್ಪ ಮೊಯ್ಲಿ ಹೇಳಿಕೆಗಿಂತಲೂ ಹೈಕಮಾಂಡ್ ಹೇಳಿಕೆ ಮುಖ್ಯ : ಸಿಎಂ
ಒಟ್ಟು 39 ಪುಟಗಳ ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು 1 ಗಂಟೆ 10 ನಿಮಿಷಗಳ ಅವಧಿಯಲ್ಲಿ ರಾಜ್ಯಪಾಲರು ಓದಿದರು. ಕಳೆದ ಬಜೆಟ್‌ನಲ್ಲಿ ಮಾಡಿದ್ದ 334 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಆಗಿದೆ. ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಸುವ್ಯವಸ್ಥೆ ಸಮಸ್ಯೆಗಳೇನು ಉದ್ಭವಿಸಿಲ್ಲ. ಅಪರಾಧ ಪ್ರಕರಣಗಳಲ್ಲೂ ಇಳಿಕೆ ಕಾಣುತ್ತಿದೆ ಎಂದು ಹೇಳುವ ಮೂಲಕ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಆರೋಪಿಸುತ್ತಿರುವ ವಿಪಕ್ಷಗಳಿಗೆ ಟಕ್ಕರ್ ಕೊಟ್ಟರು.

ಸರ್ಕಾರದ ವಿತ್ತೀಯ ನಿರ್ವಹಣೆಗೆ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಎಸ್‌ಟಿ ತೆರಿಗೆ ಸಂಗ್ರಹ, ರಾಜಸ್ವಸ್ವೀಕೃತಿ, ಕೃಷಿ, ನೀರಾವರಿ, ಪಶು ಸಂಗೋಪನೆ, ಗ್ಯಾರಂಟಿ ಯೋಜನೆಗಳು, ಮೂಲಸೌಕರ್ಯ, ಆರೋಗ್ಯ, ಶಿಕ್ಷಣ, ಕೈಗಾರಿಕೆ ಮುಂತಾದ ವಲಯಗಳಲ್ಲಿ ಕಳೆದೆರಡು ವರ್ಷಗಳ ಕಾರ್ಯಕ್ರಮ, ಕಾಮಗಾರಿ, ಅನುದಾನ ಬಗ್ಗೆ ಪ್ರಸ್ತಾಪಿಸಿ, ಶ್ಲಾಘಿಸಿದರು. ಇನ್ನೂ ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರ ಪ್ರಸ್ತಾಪಿಸಿ, ಹಿಂದಿನ ನಡೆದಿದ್ದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗಳು ತಾರ್ಕಿಕ ಅಂತ್ಯ ಕಾಣುವ ಹಂತಕ್ಕೆ ಬಂದಿವೆ ಎಂದು ಹೇಳಿದರು.

ಭಾಷಣದಲ್ಲಿ ಬೆಂಗಳೂರು ಟ್ರಾಫಿಕ್ ದಟ್ಟಣೆ ನಿಯಂತ್ರಣ ಬಗ್ಗೆ ಪ್ರಸ್ತಾಪಿಸಿದ್ದು, ಗಮನ ಸೆಳೆಯಿತು. ಮುಂದಿನ ದಿನಗಳಲ್ಲಿ ಡಬಲ್ ಡೆಕ್ಕರ್ ಮಾದರಿಯಲ್ಲಿ ಮೆಟ್ರೋ, ರಸ್ತೆ ಮೇಲ್ಸೇತುವೆ ನಿರ್ಮಾಣ ಉದ್ದೇಶ ಬಗ್ಗೆ ಸರ್ಕಾರ ಉಲ್ಲೇಖ ಮಾಡಿದೆ. 40.50 ಕಿ.ಮೀ ಸಂಯುಕ್ತ ಮೆಟ್ರೋ ರಸ್ತೆ ಮೇಲ್ಸೇತುವೆ ಯೋಜನೆಗೆ 8,916 ಕೋಟಿ ವೆಚ್ಚದ ಮಾಹಿತಿ ಕೊಡಲಾಗಿದೆ. ಇನ್ನೂ ಪೆರಿಫರಲ್-1 ಯೋಜನೆಯಡಿ 73 ಕಿ.ಮೀ ಉದ್ಧದ ರಸ್ತೆ ನಿರ್ಮಾಣದ ಮಾಹಿತಿ ಇದೆ. ಮೆಟ್ರೋ ಪ್ರಗತಿಯಲ್ಲಿರೋ ಕಾಮಗಾರಿಗಳ ಪ್ರಸ್ತಾಪಿಸಲಾಗಿದೆ.

ಆದರೆ ಹಲವು ಮುಖ್ಯ ಯೋಜನೆ, ಕಾರ್ಯಕ್ರಮಗಳನ್ನು ರಾಜ್ಯಪಾಲರ ಭಾಷಣದಲ್ಲಿ ಉದ್ದೇಶಪೂರ್ವಕವಾಗಿ ಸರ್ಕಾರ ಪ್ರಸ್ತಾಪಿಸಿಲ್ಲ. ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ, ಬ್ರ‍್ಯಾಂಡ್ ಬೆಂಗಳೂರು, ಟನೆಲ್ ರೋಡ್ ಪ್ರಾಜೆಕ್ಟ್, ಗ್ಯಾರಂಟಿಗಳಿಗೆ ಎಸ್‌ಸಿಎಸ್ಪಿ-ಟಿಎಸ್ಪಿ ಹಣ ಬಳಕೆ, ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿ, ವಿವಿಧ ನೀರಾವರಿ ಯೋಜನೆಗಳ ನಿರ್ದಿಷ್ಟ ಪ್ರಗತಿ ಹಂತ ಬಗ್ಗೆ ಮಾಹಿತಿಯೇ ಕೊಡದೇ ಜಾಣ ನಡೆ ಇಡಲಾಗಿದೆ.

ರಾಜ್ಯಪಾಲರ ಭಾಷಣ ವೇಳೆ ಸದನದಲ್ಲಿ ಕಾಂಗ್ರೆಸ್ ಶಾಸಕರಿಂದ ಮೆಚ್ಚುಗೆ ಸಿಗಲಿಲ್ಲ. ಶಾಸಕರು ಭಾಷಣ ವೇಳೆ ಮೇಜು ಕುಟ್ಟದೇ ಸಾವಧಾನದಲ್ಲಿ ಕೂತು ಭಾಷಣ ಕೇಳಿದ್ದು, ಅಚ್ಚರಿ ಮೂಡಿಸಿತು. ಬಿಜೆಪಿ ಪರಿಷತ್ ಸದಸ್ಯರು ರಾಜ್ಯಪಾಲರ ಭಾಷಣವನ್ನು ಕೇಸರಿ ಶಾಲು ಹಾಕಿಕೊಂಡು ಕೇಳಿದರು. ರಾಜ್ಯಪಾಲರ ಭಾಷಣ ಮುಗಿದ ಬಳಿಕ ಬಿಜೆಪಿ ಶಾಸಕರಿಂದ ಭಾರತ್ ಮಾತಾಕೀ ಜೈ ಎಂದು ಘೋಷಣೆ ಮೊಳಗಿಸಲಾಯಿತು.ಇದನ್ನೂ ಓದಿ: ರಾಜ್ಯಪಾಲರ ಬಾಯಲ್ಲಿ ಹಸಿ ಸುಳ್ಳು ಹೇಳಿಸಿದ ಸರ್ಕಾರ: ಬಿಜೆಪಿ ಟೀಕೆ
 


 
		 
		 
		 
		 
		
 
		 
		 
		 
		