ಮೈಸೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹಾಗೂ ಪಂಚ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruhakshmi Scheme) ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಇದೇ ವೇಳೆ ನೂರು ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಸಾಧನೆಯನ್ನ ಕೈಪಿಡಿ ಮೂಲಕ ಹೊರತರಲಾಗಿದೆ.
ಗೃಹಲಕ್ಷ್ಮಿ ಯೋಜನೆ ಚಾಲನೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ (Siddaramaiah), ಈ ಹಿಂದೆ 165 ಭರಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿದೆ. ಈ ಬಾರಿಯೂ ಕಾಂಗ್ರೆಸ್ ಸರ್ಕಾರ (Congress Government) ನೀಡಿದ ಎಲ್ಲ ಭರವಸೆಗಳನ್ನು 5 ವರ್ಷಗಳಲ್ಲಿ ಈಡೇರಿಸುತ್ತೇವೆ ಎನ್ನುವ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾವು ಯಾವತ್ತೂ ನಿಮಗೆ ಸುಳ್ಳು ಹೇಳಲ್ಲ, ಸುಳ್ಳು ಆಶ್ವಾಸನೆ ಕೊಡಲ್ಲ: ರಾಹುಲ್ ಗಾಂಧಿ
Advertisement
Advertisement
ಮೋದಿಗೆ ತಿರುಗೇಟು
ನಮ್ಮ ಪಕ್ಷದಿಂದ ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗ ಇದನ್ನ ನೆರವೇರಿಸಲು ಸಾಧ್ಯವಿಲ್ಲ ಅಂತ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಟೀಕೆ ಮಾಡಿದವು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಆರ್ಥಿಕವಾಗಿ ದಿವಾಳಿಯಾಗುತ್ತೆ ಅಂತಾ ಹೇಳಿದ್ದರು. ಆದ್ರೆ ನಾವಿಂದು ನಾಲ್ಕು ಗ್ಯಾರಂಟಿಗಳನ್ನ ಜಾರಿ ಮಾಡಿದ್ದೇವೆ. ಯುವನಿಧಿ 5ನೇ ಗ್ಯಾರಂಟಿ ಡಿಸೆಂಬರ್ ಅಥವಾ ಜನವರಿಯಲ್ಲಿ ಜಾರಿಗೆ ಬರುತ್ತದೆ. ಆದ್ರೆ ಕರ್ನಾಟಕ ದಿವಾಳಿ ಆಗಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳೂ ಸಹ ನಿಂತಿಲ್ಲ ಎಂದು ತಿರುಗೇಟು ನೀಡಿದರು.
Advertisement
Advertisement
ಮೋದಿ ಅವರೇ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆಗಳಿಗೆ ಅನುದಾನ ಕೊಟ್ಟಿದ್ದೇವೆ. ಕುಡಿಯುವ ನೀರಿನ ಯೋಜನೆಗೂ ಅನುದಾನ ಕೊಟ್ಟು ಗ್ಯಾರಂಟಿಗಳನ್ನೂ ಈಡೇರಿಸುತ್ತಿದ್ದೇವೆ. ಕಾಂಗ್ರೆಸ್ ಯಾವತ್ತಿಗೂ ಬಡವರು, ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು, ರೈತರು, ಯುವಕರು, ಕಾರ್ಮಿಕರು ಹಾಗೂ ಎಲ್ಲ ನೊಂದ ಜನರ ಪರವಾಗಿ ಇರುವ ಸರ್ಕಾರ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಹೇಳಿದರು.
ವಿರೋಧ ಪಕ್ಷದವರು ಏನೇ ಟೀಕೆ ಮಾಡಿದ್ರೂ ಅದೆಲ್ಲ ಸುಳ್ಳು, ಇವತ್ತು ಸತ್ಯ ನಿಮ್ಮ ಮುಂದೆ ಇದೆ. ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ನಿಮ್ಮ ಮುಂದೆ ಇದೆ. ಪ್ರತಿಪಕ್ಷದವರು ಮಾಡುವ ಆರೋಪಗಳೆಲ್ಲವೂ ಸುಳ್ಳು ಎಂದು ಗುಡುಗಿದರು. ಇದನ್ನೂ ಓದಿ: 525 ಕೋಟಿ ನಕಲಿ ಜಿಎಸ್‌ಟಿ ವಹಿವಾಟು – 30ಕ್ಕೂ ಹೆಚ್ಚು ನಕಲಿ ಕಂಪನಿ ಸೃಷ್ಟಿಸಿದ್ದ ಇಬ್ಬರು ಅರೆಸ್ಟ್
ನೂರು ದಿನಗಳ ಸಾಧನೆ
ನಮ್ಮ ಸರ್ಕಾರ ಬಂದು ನೂರು ದಿನಗಳು ಕಳೆದಿವೆ. ನಮ್ಮ ಸಾಧನೆಯನ್ನ ತಿಳಿಸುವುದಕ್ಕೋಸ್ಕರ ಸಾಧನೆಗಳ ಕೈಪಿಡಿಯನ್ನು ಹೊರತರಲಾಗಿದೆ. ನಮ್ಮ ಸಾಧನೆ, ಕರ್ತವ್ಯ ಹಾಗೂ ಮುಂದಿನ ಯೋಜನೆಗಳನ್ನು ಜನರಿಗೆ ತಿಳಿಸುವುದು ಸರ್ಕಾರದ ಕರ್ತವ್ಯವೂ ಹೌದು. ಜೊತೆಗೆ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನ ಈಡೇರಿಸುವುದು ಸರ್ಕಾರದ ಜವಾಬ್ದಾರಿ. ಹಿಂದಿನ ಯಾವುದೇ ಸರ್ಕಾರಗಳು ನೂರು ದಿನಗಳಲ್ಲಿ ಕೊಟ್ಟ ಮಾತನ್ನು ಈಡೇರಿಸಿರಲಿಲ್ಲ. ಆದ್ರೆ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದರು.
5 ಗ್ಯಾರಂಟಿ ಜನರ ಮುಂದೆ ಇಟ್ಟಿದ್ದೇವೆ. ಅದರಲ್ಲಿ ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಗಳನ್ನ ಜಾರಿಗೊಳಿಸಿದ್ದೇವೆ. ರಾಜ್ಯದಲ್ಲಿ ಸುಮಾರು 1.26 ಕುಟುಂಬಗಳಲ್ಲಿ ಕುಟುಂಬದ ಯಜಮಾನಿಗೆ 2 ಸಾವಿರ ಅವರ ಖಾತೆಗೆ ನೇರವಾಗಿ ಜಮೆ ಮಾಡುವ ಕೆಲಸ ಮಾಡುತ್ತಿದ್ದೇವೆ. 1.10 ಕೋಟಿ ಜನ ನೋಂದಣಿ ಮಾಡಿಸಿಕೊಂಡಿದ್ದಾರೆ. ಇಡೀ ಭಾರತದಲ್ಲಿ ಯಾವುದೇ ರಾಜ್ಯವೂ ಇಷ್ಟು ದೊಡ್ಡಮಟ್ಟದ ಕಾರ್ಯಕ್ರಮ ಮಾಡಿಲ್ಲ ಎಂದು ಹೇಳಿದರು.
ಕಳೆದ ಜೂನ್ 11 ರಂದು ಶಕ್ತಿ ಯೋಜನೆ ಜಾರಿಗೆ ತರಲಾಯಿತು. ಅವತ್ತಿನಿಂದ ಆ.29ರ ವರೆಗೆ 48.50 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿ, ಪ್ರಯೋಜನ ಪಡೆದಿದ್ದಾರೆ. ಅನ್ನಭಾಗ್ಯ ಯೋಜನೆ ಜುಲೈ 10 ರಂದು ಜಾರಿಗೆ ತರಲಾಯಿತು. ಆದ್ರೆ ಮೊದಲು ಅಕ್ಕಿ ಕೊಡುತ್ತೇವೆ ಎಂದಿದ್ದ ಕೇಂದ್ರ ಸರ್ಕಾರ ಆಮೇಲೆ ಯೋಜನೆ ಯಶಸ್ವಿಯಾಗಬಾರದು ಅಂತ ಅಕ್ಕಿ ಕೊಡಲು ನಿರಾಕರಿಸಿತು. ಆದ್ದರಿಂದ ಅಕ್ಕಿ ಸಿಗೋವರೆಗೆ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ದಾರರಿಗೆ 175 ರೂ. ಖಾತೆಗೆ ಜಮೆ ಮಾಡುವ ಕೆಲಸ ಮಾಡಿದ್ದೇವೆ. ಜುಲೈನಿಂದ ಗೃಹಜ್ಯೋತಿ 200 ಯೂನಿಟ್ ಬಳಸುವವರಿಗೆ ಉಚಿತ ವಿದ್ಯುತ್ ಕಲ್ಪಿಸುತ್ತಿದ್ದೇವೆ. 1.56 ಕೋಟಿ ಜನ ನೋಂದಣಿ ಆಗಿದ್ದಾರೆ. ಅವರೆಲ್ಲರಿಗೂ ಶೂನ್ಯ ಬಿಲ್ ಕೊಡುತ್ತಿದ್ದೇವೆ ಎಂದು ಸರ್ಕಾರದ ಸಾಧನೆಯನ್ನ ಗುಣಗಾನ ಮಾಡಿದ್ದಾರೆ.
Web Stories