ಬೆಳಗಾವಿ: ಅಪಘಾತದಲ್ಲಿ ಮೃತಪಟ್ಟ ಯೋಧನ ಅಂತ್ಯ ಸಂಸ್ಕಾರಕ್ಕೆ ಜಾಗ ಕೇಳಿದ್ದಕ್ಕಾಗಿ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿರುವುದು ಬೈಲಹೊಂಗಲ ತಾಲೂಕಿನ ಮುರಗೋಡ ಗ್ರಾಮದಲ್ಲಿ ನಡೆದಿದೆ.
ಯೋಧ ವಿಷ್ಣು ಕಾರಜೋಳ (25) ಮೂರು ತಿಂಗಳ ಹಿಂದೆ ಕರ್ತವ್ಯದಲ್ಲಿದ್ದಾಗಲೇ ಬಿದ್ದು ಗಾಯಗೊಂಡಿದ್ದರು. ಗಾಯಗೊಂಡ ಯೋಧನನ್ನು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳಿದಿದ್ದರು.
ಭಾನುವಾರ ಸ್ವಗ್ರಾಮ ಮುರಗೋಡ್‍ಗೆ ಮೃತ ಯೋಧನ ಪಾರ್ಥಿವ ಶರೀರವನ್ನು ತರಲಾಗಿತ್ತು. ಈ ವೇಳೆ ಯೋಧನ ಅಂತ್ಯಕ್ರಿಯೆಗೆ ಗ್ರಾಮಸ್ಥರು ಗ್ರಾಮದಲ್ಲಿ ಸರ್ಕಾರಿ ಜಾಗಕ್ಕಾಗಿ ಗ್ರಾಮ ಪಂಚಾಯತಿ ಬಳಿ ಬೇಡಿಕೆ ಇಟ್ಟಿದ್ದರು. ಪಿಡಿಒ ಸರ್ಕಾರಿ ಜಾಗ ಕೊಡಲು ಸಾಧ್ಯವಿಲ್ಲ. ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುವಂತೆ ಹೇಳಿದ್ದರು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದ್ದರು.
ರೊಚ್ಚಿಗೆದ್ದ ಗ್ರಾಮಸ್ಥರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿದ್ದರು. ಬಳಿಕ ಯೋಧನ ಕುಟುಂಬಸ್ಥರು ತಡರಾತ್ರಿ ಸಾರ್ವಜನಿಕ ರುಧ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಪೊಲೀಸರ ನಡೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.