ವಾಯುಸೇನೆಯಲ್ಲಿದ್ದ ಮಗನ ಸಾವನ್ನು ಮರೆಯಲು ಸ್ಲಂ ಮಕ್ಕಳಿಗೆ ಶಿಕ್ಷಣ ಕೊಡ್ತಿರುವ ದಂಪತಿ

Public TV
3 Min Read
Airforce parents 2

ಇಟಾನಗರ: ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಗನನ್ನು ವಿಮಾನ ಅಪಘಾತದಲ್ಲಿ ಕಳೆದುಕೊಂಡ ದಂಪತಿ ಈಗ ಸ್ಲಂ ಮಕ್ಕಳ ಏಳಿಗೆಗಾಗಿ ಶ್ರಮಿಸುವ ಜೊತೆ ಆ ಮಕ್ಕಳಲ್ಲಿ ಮಗನನ್ನು ಕಾಣುತ್ತಿದ್ದಾರೆ.

ಘಾಜಿಯಾಬಾದ್ ನಿವಾಸಿಗಳಾದ ನಿವೃತ್ತ ಗ್ರೂಪ್ ಕ್ಯಾಪ್ಟನ್ ಶರದ್ ತೆವಾರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸವಿತಾ ತೆವಾರಿ ದಂಪತಿ ಸ್ಲಂ ಮಕ್ಕಳಿಗಾಗಿ ಶ್ರಮಿಸುತ್ತಿದ್ದಾರೆ. ಇವರ ಮಗ ಶಿಶಿರ್ ತೆವಾರಿ ಅವರು ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿದ್ದರು. ದುರಾದೃಷ್ಟವಶಾತ್ 2017ರ ಅ. 6ರಂದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಎಂಐ-17 ವಿ5(Mi-17 V5) ವಿಮಾನ ಅಪಘಾತದಲ್ಲಿ ಶಿಶಿರ್ ಹುತಾತ್ಮರಾಗಿದ್ದರು.

Airforce parents 1

ಮಗನ ಅಗಲಿಕೆಯ ನೋವು ಮರೆಯಲು ತೆವಾರಿ ದಂಪತಿ ಶಿಕ್ಷಣದಿಂದ ವಂಚಿತರಾಗಿರುವ ಸ್ಲಂ ಮಕ್ಕಳಿಗೆ ಶಿಕ್ಷಣ ಕೊಟ್ಟು, ಸಾಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡಬೇಕು ಎಂದು ಪಣತೊಟ್ಟರು. 2018ರ ಆಗಸ್ಟ್ 15 ರಂದು ದಂಪತಿ ದೆಹಲಿಯ ಯಮುನಾ ಖಾದರ್ ಸ್ಲಂನ 100 ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಆರಂಭಿಸಿದರು. ಇದೇ ಉದ್ದೇಶದಿಂದ ಶಹೀದ್ ಸ್ಕ್ವಾಡ್ರನ್ ಲೀಡರ್ ಶಿಶಿರ್ ತೆವಾರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ್ನು ಶುರುಮಾಡಿದರು. ಬಡ ಮಕ್ಕಳು ಕೂಡ ಶಿಕ್ಷಣ ಪಡೆದು ತಮ್ಮ ಮಗನಂತೆ ಮುಂದೆ ದೇಶ ಸೇವೆ ಮಾಡುವ ವ್ಯಕ್ತಿಗಳಾಗಿ ಹೊರಹೊಮ್ಮಲಿ ಎಂದು ಆಶಿಸಿದರು. ಸದ್ಯ ದಂಪತಿ 350 ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

ತೆವಾರಿ ದಂಪತಿಗೆ ಸ್ಲಂ ಮಕ್ಕಳ ಶಿಕ್ಷಣದ ಬಗ್ಗೆ ಇರುವ ಕಾಳಜಿ ನೋಡಿದ ಸ್ಲಂ ಕಮಿಟಿ ಈ ಪ್ರದೇಶದಲ್ಲಿ ಶಾಲೆ ತೆರೆಯಲು ಅವರಿಗೆ ಅವಕಾಶ ನೀಡಿತ್ತು. ಅಷ್ಟೇ ಅಲ್ಲದೆ ತೆವಾರಿ ದಂಪತಿ ಕಾರ್ಯ ನೋಡಿ ಅವರ ಸಂಬಂಧಿಕರು, ಸ್ನೇಹಿತರು ಕೂಡ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ಸ್ಲಂ ಮಕ್ಕಳಿಗಾಗಿ ತೆರೆದ ಶಾಲೆಯಲ್ಲಿ ವಾರಕ್ಕೆ 5 ದಿನಗಳು ಮಾತ್ರ ಪಾಠ ನಡೆಯುತ್ತದೆ. ಪ್ರಸ್ತುತವಾಗಿ 1ನೇ ತರಗತಿಯಿಂದ 12ನೇ ತರಗತಿವರೆಗೆ 350 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಈ ಬಡ ಮಕ್ಕಳಿಗೆ ಪಾಠ ಹೇಳಿಕೊಡಲು, ಹೋಂವರ್ಕ್ ಮಾಡಿಸಲು 25 ಮಂದಿ ಸ್ವಯಂ ಸೇವಕರು ದಂಪತಿಗೆ ಸಹಾಯ ಮಾಡುತ್ತಿದ್ದಾರೆ. ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ವಿಷಯಗಳನ್ನೂ ಸಹ ಶಾಲೆಯಲ್ಲಿ ಮಕ್ಕಳಿಗೆ ಹೇಳಿಕೊಡಲಾಗುತ್ತದೆ ಎಂದು ಶರದ್ ಅವರು ತಿಳಿಸಿದರು.

Airforce parents

ಸ್ಲಂ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶ ಸಿಗುವುದು ತೀರಾ ಕಡಿಮೆ. ಅವರು ಶಿಕ್ಷಣದಿಂದ ವಂಚಿತರಾಗುತ್ತಾರೆ, ಬಡ ಪೋಷಕರು ಜೀವನ ನಡೆಸಲು ಮಕ್ಕಳನ್ನು ಕೂಡ ಕೆಲಸಕ್ಕೆ ಕಳಿಸುತ್ತಾರೆ. ಅಲ್ಲದೆ ಸ್ಲಂ ಪ್ರದೇಶಗಳಲ್ಲಿ ಅನಾರೋಗ್ಯವು ಹೆಚ್ಚಾಗಿರುತ್ತದೆ. ಹೊತ್ತಿನ ಊಟಕ್ಕೆ ಕಷ್ಟಪಡುವ ಮಂದಿ ಆರೋಗ್ಯದ ಕಡೆ ಸರಿಯಾಗಿ ಗಮನ ಕೊಡುವುದಿಲ್ಲ. ಆದ್ದರಿಂದ ಇಂತಹ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆವು. ನಮ್ಮಲ್ಲಿರುವ ಜ್ಞಾನ ಮತ್ತು ಸಂಪತ್ತನ್ನು ಈ ಮಕ್ಕಳಿಗೆ ಧಾರೆ ಎರೆಯಲು ಶ್ರಮಿಸುತ್ತಿದ್ದೇವೆ ಎಂದು ಶರದ್ ಅವರು ಹೇಳಿದರು.

ಪ್ರೌಢ ಶಿಕ್ಷಣದ ಬಳಿಕ ಓದಲು ಇಚ್ಛಿಸದ ಹೆಣ್ಣುಮಕ್ಕಳಿಗೆ ಈ ಶಾಲೆಯಲ್ಲಿ ಬಟ್ಟೆ ಹೊಲಿಯುವ ತರಬೇತಿಯನ್ನು ನೀಡಲಾಗುತ್ತಿದೆ. ಸ್ಲಂ ಪ್ರದೇಶಗಳಲ್ಲಿ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಆದ್ದರಿಂದ ಆಗಾಗ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಇಲ್ಲಿ ಮಾಡಲಾಗುತ್ತದೆ. ಈ ಮೂಲಕ ಇಲ್ಲಿನ ಮಕ್ಕಳು ಮಾತ್ರವಲ್ಲ ಜನರಲ್ಲಿ ಕೂಡ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

school

ಕಳೆದ 1 ವರ್ಷ ನಾವು ಸ್ವಚ್ಛತೆ, ನೈರ್ಮಲ್ಯ ಹೀಗೆ ಪ್ರಮುಖ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಿದ್ದೇವೆ. ಶಾಲೆ ಆರಂಭಿಸಿದ ಕೆಲವು ತಿಂಗಳ ಬಳಿಕ ದಂಪತಿ ತಮ್ಮ ಟ್ರಸ್ಟ್‍ನ ಚಟುವಟಿಕೆಗಳನ್ನು ವಿಸ್ತರಿಸಿಸದೆವು. ಮೊದಲು ಕೇವಲ ಮೆಟ್ರೋ ಶೆಡ್‍ನ ಕೆಳಗೆ 50ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಆ ಬಳಿಕ ಬೇರೆ ಸ್ಲಂ ಪ್ರದೇಶಗಳಲ್ಲಿನ ಮಕ್ಕಳಿಗೂ ಶಿಕ್ಷಣ ಕೊಡಬೇಕೆಂದು ತೀರ್ಮಾನಿಸಿದೆವು. ಇಲ್ಲಿ ಶಿಕ್ಷಣ ಕಲಿತ ಮಕ್ಕಳು ತಮ್ಮ ಮಗನಂತೆ ದೇಶಕ್ಕಾಗಿ ಕೊಡುಗೆ ನೀಡಬೇಕು. ಲಾಯರ್, ಎಂಜಿನಿಯರ್, ಪೈಲಟ್, ಜರ್ನಲಿಸ್ಟ್, ಯೋಧನಾಗಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂಬ ಆಶಯವನ್ನು ಸವಿತಾ ಹೊಂದಿದ್ದಾರೆ.

ನಮ್ಮ ಮಗ ಶಿಶಿರ್‍ನ ಶೌರ್ಯ ಮತ್ತು ತತ್ವವೇ ನಮಗೆ ಪ್ರೇರಣೆ. ನಮ್ಮ ಮಗನಿಗೆ ಗೌರವ ಸಲ್ಲಿಸಲು ಈ ಮಾರ್ಗವನ್ನು ನಾವು ಆಯ್ದುಕೊಂಡೆವು. ನಮ್ಮ ಮಗ ನಮ್ಮ ಕೆಲಸ ನೋಡಿ ಹೆಮ್ಮೆ ಪಡುತ್ತಾನೆ ಎಂದು ನಾನು ನಂಬಿದ್ದೇನೆ ಎಂದು ಸವಿತಾ ಅವರು ಖುಷಿಯನ್ನು ಹಂಚಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *