– ಅಗಲಿದ ಗಣ್ಯರಿಗೆ ಸದನದಲ್ಲಿ ಸಂತಾಪ
– ಗದ್ಗದಿತರಾದ ಸಿಎಂ ಬೊಮ್ಮಾಯಿ
ಬೆಳಗಾವಿ: ಚಳಿಗಾಲದ ಅಧಿವೇಶನದ ಮೊದಲ ದಿನವಾದ ಇಂದು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ನಿರ್ಣಯ ಕೈಗೊಳ್ಳಲಾಯಿತು. ವಿಧಾನಸಭೆಯಲ್ಲಿ ಇಂದು ಮಾಜಿ ರಾಜ್ಯಪಾಲ ರೋಸಯ್ಯ ಸಿಡಿಎಸ್ ಬಿಪಿನ್ ರಾವತ್, ನಟರಾದ ಪುನೀತ್, ಶಿವರಾಂ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ನಿರ್ಣಯ ಕೈಗೊಳ್ಳಲಾಯ್ತು.
Advertisement
ಮೊಳಗಿತು ಪುನೀತ್ ಗುಣಗಾನ: ವಿಧಾನಸಭೆಯಲ್ಲಿ ಇಂದು ನಟ ಪುನೀತ್ ರಾಜಕುಮಾರ್ ಸ್ಮರಣೆ ನಡೆಯಿತು. ಸದನದಲ್ಲಿ ಪುನೀತ್ ಗುಣಗಾನ ಮಾಡಿ ಸಂತಾಪ ನಿರ್ಣಯ ಸಲ್ಲಿಸಿ ಗೌರವ ಸೂಚಿಸಲಾಯಿತು. ಇದೇ ವೇಳೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಶೀಘ್ರ ದಿನಾಂಕ ನಿಗದಿ ಮಾಡುವುದಾಗಿ ಸಿಎಂ ಘೋಷಿಸಿದರು. ಇದನ್ನೂ ಓದಿ: ಬೆಳಗಾವಿಯಿಂದ ‘ಸುಶಾಸನ ಸಂಗಮ’ಕ್ಕೆ ವಾರಾಣಸಿಗೆ ಹೊರಟ ಸಿಎಂ ಬೊಮ್ಮಾಯಿ
Advertisement
Advertisement
ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಕುಳಿತಲ್ಲೇ ಗದ್ಗದಿತರಾದರು. ಬಳಿಕ ಸಂತಾಪ ಸೂಚಿಸಿ ಮಾತನಾಡಿದ ಸಿಎಂ, ಪುನೀತ್ ರಾಜಕುಮಾರ್ ಗೆ ಈಗಾಗಲೇ ಮರಣೋತ್ತರವಾಗಿ ಕರ್ನಾಟಕ ರತ್ನ ಘೋಷಣೆ ಮಾಡಿದ್ದೇವೆ, ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದ ದಿನಾಂಕವನ್ನ ಶೀಘ್ರ ಪ್ರಕಟ ಮಾಡುತ್ತೇವೆ. ಅಲ್ಲದೆ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ. ವಿರೋಧ ಪಕ್ಷದ ನಾಯಕರು ಕೂಡ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಪತ್ರ ಬರೆದಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಶಿಫಾರಸು ಮಾಡಲಿದೆ. ಪ್ರತಿಭೆ ಮತ್ತು ಸಾಧನೆಗೆ ಅಲ್ಪಾಯುಷ್ಯ ಇದೆ ಅನ್ನಿಸುತ್ತೆ. ಯಾರೂ ಹೀಗೆ ಸಾವನ್ನ ನಿರೀಕ್ಷೆ ಮಾಡಿರಲಿಲ್ಲ. ರಾಜ್‍ಕುಮಾರ್ ನಿಧನದ ವೇಳೆ ಆದಂತಹ ಕಹಿ ಘಟನೆಗಳು ನಡೆಯದೇ ಜನರ ಸಹಕಾರ, ಪೊಲೀಸರ ಸಹಕಾರಿಂದ ಎಲ್ಲವೂ ವ್ಯವಸ್ಥಿತವಾಗಿತ್ತು ಎಂದರು. ಇದನ್ನೂ ಓದಿ: ನಾಳೆ ಬೆಳಗಾವಿ ಬಂದ್‍ಗೆ MES ಕರೆ – ಬಂದ್‍ಗೆ ಅವಕಾಶ ಕೊಡಲ್ಲ ಎಂದ ಕರ್ನಾಟಕ ಪೊಲೀಸ್
Advertisement
ಪುನೀತ್ ರಾಜ್‍ಕುಮಾರ್ ಸಾಕಷ್ಟು ಟ್ಯಾಲೆಂಟ್ ಆಗಿದ್ದರು. ಅಪ್ಪು ನಿಧನದ ಬಳಿಕ ಸಾಕಷ್ಟು ಜನರು ಬಂದು ಅವರ ಅಂತಿಮ ದರ್ಶನ ಮಾಡಿದ್ದರು. ಅಪ್ಪು ಕುಟುಂಬದವರು ಸರ್ಕಾರಕ್ಕೆ ಸಹಕಾರ ಕೊಟ್ಟರು. ಚಿತ್ರರಂಗದ ಜೊತೆ ಸಮಾಜ ಸೇವೆಯನ್ನೂ ಮಾಡುತ್ತಿದ್ದರು. ಕೋಚಿಂಗ್ ಕ್ಲಾಸ್ ತೆಗೆದಿದ್ದರು. ವೈಲ್ಡ್ ಲೈಫ್ ಸಾಕ್ಷ್ಯಚಿತ್ರ ರಿಲೀಸ್ ಬಗ್ಗೆ ಅಪ್ಪು ಸಾವಿನ ಮೂರು ದಿನದ ಹಿಂದೆ ಮಾತನಾಡಿದ್ದರು. ಅಪ್ಪು ಭೇಟಿಗೆ ಸಮಯ ಕೂಡಾ ನಿಗದಿಯಾಗಿತ್ತು. ಆದರೆ ವಿಧಿಯಾಟ ಬೇರೆಯೇ ಆಗಿತ್ತು ಅನಿಸುತ್ತಿದೆ. ಆದರೆ ಕರ್ನಾಟಕ ಈಗ ಬಡವಾಗಿದೆ ಎಂದರು. ಇದನ್ನೂ ಓದಿ: ಕನ್ನಡ ಕಾರ್ಯಕರ್ತರಿಂದ MES ಮುಖಂಡನ ಮುಖಕ್ಕೆ ಮಸಿ
ಅಪ್ಪುಗಾಗಿ ‘ರಾಜಕುಮಾರ’ ನೋಡಿದೆ!: ಬಳಿಕ ಸಂತಾಪ ಸೂಚಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಅಪ್ಪು ಸ್ಮರಣೆ ಮಾಡಿದರು. ರಾಜಕುಮಾರ್ ಅವರ ಗುಣಗಳು ಪುನೀತ್ ರಾಜ್‍ಕುಮಾರ್‍ಗೆ ಬಳುವಳಿಯಾಗಿ ಬಂದಿತ್ತು. ಬಹಳ ಚಿಕ್ಕ ವಯಸ್ಸಿನಲ್ಲೇ ಹೆಚ್ಚು ಜನಪ್ರಿಯರಾಗಿದ್ದರು. ಪುನೀತ್ ನನ್ನನ್ನು ಮಾಮ ಅಂತಿದ್ದ. ರಾಜಕುಮಾರ್ ಸಿನಿಮಾ ನೋಡುವಂತೆ ಹೇಳಿದರು. ನಾನು ಥಿಯೇಟರ್ ಗೆ ಹೋಗ್ತಿರಲಿಲ್ಲ, ಆದ್ರೆ ಮೈಸೂರಲ್ಲಿ ಪುನೀತ್ ರಾಜಕುಮಾರ್ ಗಾಗಿ ರಾಜಕುಮಾರ ಸಿನಿಮಾ ನೋಡಿದೆ. ಅಪ್ಪು ಸಮಾಜಮುಖಿ ಕೆಲಸ ಮಾಡುತ್ತಿದ್ದರು. ಅಪರೂಪದ ವ್ಯಕ್ತಿಯಾಗಿದ್ದ ಅಪ್ಪು ಅವರನ್ನು ಕಳೆದುಕೊಂಡಿದ್ದೇವೆ. ಪುನೀತ್‍ಗೆ ಪುನೀತ್ ಅವರೇ ಸಾಟಿ ಎನ್ನುತ್ತಾ ಪುನೀತ್ ಜೊತೆಗಿನ ಬಾಂಧವ್ಯ ಹಾಗೂ ನೆನಪುಗಳನ್ನ ಮೆಲುಕು ಹಾಕಿದರು. ಇದನ್ನೂ ಓದಿ: ತವರು ಜಿಲ್ಲೆಯ ಅಧಿವೇಶನಕ್ಕೂ ಬರಲಿಲ್ಲ ರಮೇಶ್ ಜಾರಕಿಹೊಳಿ!
ವಿಧಾನ ಪರಿಷತ್‍ನಲ್ಲೂ ಅಪ್ಪು ನೆನಪು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಕುರಿತು ಸಂತಾಪ ಸೂಚನೆ ಮಂಡಿಸಿದ ಸಭಾಪತಿಯವರು, ಬಾಲನಟರಾಗಿ ಚಿತ್ರರಂಗ ಪ್ರವೇಶಿಸಿದ ಪುನೀತ್ ರಾಜ್‍ಕುಮಾರ್ ಅವರು, 10ನೇ ವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿ ಪಡೆದರು. ನಾಯಕ ನಟನಾಗಿ 32 ಚಿತ್ರಗಳಲ್ಲಿ ನಟಿಸಿದರು. ಅಪ್ಪು ಚಿತ್ರದಿಂದ ಆರಂಭಿಸಿ ಯುವರತ್ನದವರೆಗೂ ಪ್ರತಿಯೊಂದು ಚಿತ್ರದಲ್ಲೂ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು. ಚಲನಚಿತ್ರ ಹೊರತಾಗಿಯೂ ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದರು. ಡಾ.ರಾಜ್ ಫೌಂಡೇಶನ್ ತಂಡ ಕಟ್ಟಿ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ಹಲವಾರು ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ ಎಂದು ಪುನೀತ್ ಸಾಧನೆಯನ್ನು ಕೊಂಡಾಡಿದರು.
ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಪುನೀತ್ ರಾಜ್‍ಕುಮಾರ್ ಅವರ ನಿಧನದ ಬಳಿಕ ಅವರ ಸಮಾಜ ಸೇವೆಗಳು ಹೊರ ಬಂದವು. ಸರ್ಕಾರದ ಹಲವಾರು ಜನಪರ ಯೋಜನೆಗಳಿಗೆ ಅವರು ರಾಯಭಾರಿಯಾಗಿದ್ದರು ಎಂದರು.
ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಅವರು ಮಾತನಾಡಿ, ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆ ಸಂದರ್ಭದಲ್ಲಿ ಶಾಂತಿ ಪಾಲನೆಗಾಗಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಪ್ರಶಂಸಿಸಿದರು.