ಮುಂಬೈ: ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ ಎಂದು ಹೇಳುವ ಮೂಲಕ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ರಾತ್ರೋರಾತ್ರಿ ಇಂಟರ್ ನೆಟ್ ಸ್ಟಾರ್ ಆದ ರಾನು ಮೊಂಡಲ್ ಅವರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ರಾನು ಮೊಂಡಲ್ ಅವರ ಬಗ್ಗೆ ಮಾತನಾಡಿದ ಲತಾ ಮಂಗೇಶ್ಕರ್ ಅವರು, ನನ್ನ ಹೆಸರು ಹಾಗೂ ಕೆಲಸದಿಂದ ಯಾರಿಗಾದರೂ ಒಳ್ಳೆಯದ್ದು ಆಗಿದ್ದರೆ, ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಯಾರನ್ನಾದರೂ ಅನುಕರಿಸುವುದರಿಂದ ಯಶಸ್ಸು ಸಿಗುವುದಿಲ್ಲ. ನಾನು, ಕಿಶೋರ್, ರಫಿ, ಮುಕೇಶ್ ಅಥವಾ ಆಶಾ ಅವರು ಹಾಡಿದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ಆಕರ್ಷಿಸಬಹುದು. ಆದರೆ ಇದು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಅವರು, ಹಳೆ ಗಾಯಕರ ಹಾಡುಗಳನ್ನು ಹಾಡುವುದು ಸರಿ. ಆದರೆ ಒಂದು ದಿನ ಅವರು ತಾವು ಹಾಡಿದ ಹಾಡಿನ ಮೂಲಕ ಜನರಿಗೆ ಪರಿಚಯವಾಗಬೇಕು ಎಂದು ಲತಾ ಮಂಗೇಶ್ಕರ್ ಅವರು ಹೊಸ ಗಾಯಕರಿಗೆ ಸಲಹೆ ನೀಡಿದ್ದಾರೆ.
ರೈಲ್ವೇ ನಿಲ್ದಾಣದಲ್ಲಿ `ಎಕ್ ಪ್ಯಾರ್ ಕಾ ನಗ್ಮ’ ಎಂದು ಹಾಡಿ ರಾನು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದರು. ಬಳಿಕ ಅವರಿಗೆ ಖ್ಯಾತ ಗಾಯಕ ಹಿಮೇಶ್ ರೆಶ್ಮೀಯ ಅವರು ತಮ್ಮ ಚಿತ್ರದಲ್ಲಿ `ತೇರಿ ಮೇರಿ ಕಹಾನಿ’ ಎಂದು ಹಾಡಲು ಅವಕಾಶ ಕೊಟ್ಟರು. ಈ ಹಾಡನ್ನು ರಾನು ಅವರು ರೆಕಾರ್ಡಿಂಗ್ ಮಾಡುತ್ತಿದ್ದ ವಿಡಿಯೋ ತುಣುಕನ್ನು ಹಿಮೇಶ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಬಳಿಕ ಹಿಮೇಶ್ ಅವರು ಮತ್ತೊಂದು ಹೊಸ ಹಾಡನ್ನು ರಾನು ಅವರಿಂದ ಹಾಡಿಸಿದ್ದಾರೆ.