ಮುಂಬೈ: ಖ್ಯಾತ ಗಾಯಕಿ, ಭಾರತ ರತ್ನ ಪುರಸ್ಕೃತೆ ಲತಾ ಮಂಗೇಶ್ಕರ್ ಅವರು ಇಂದು ನಿಧನರಾದರು. ಭಾರತದ ಗಾನ ಕೋಗಿಲೆ ಎಂದೇ ಹೆಸರಾಗಿದ್ದ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಪ್ರಧಾನಿ, ರಾಷ್ಟ್ರಪತಿ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
70 ವರ್ಷಗಳ ಕಾಲ ವೃತ್ತಿ ಜೀವನದಲ್ಲಿ ಸಾವಿರಾರು ಸಂಖ್ಯೆಯ ಹಾಡುಗಳ ಮೂಲಕ ತಮ್ಮ ಮಧುರ ಧ್ವನಿಯನ್ನು ಬಿಟ್ಟು ಹೋಗಿದ್ದಾರೆ. ಅವರ ಸೋಲೋಗಳು, ಮೊಹಮ್ಮದ್ ರಫಿ, ಕಿಶೋರ್ ಕುಮಾರ್ ಮತ್ತು ಮುಕೇಶ್ ಅವರೊಂದಿಗಿನ ಯುಗಳ ಗೀತೆಗಳು, ಹಿಂದಿ ಚಿತ್ರರಂಗದ ಅತ್ಯಂತ ಸ್ಮರಣೀಯ ಹಾಡುಗಳು ಜನಮಾನಸದಲ್ಲಿ ನೆಲೆಸಿವೆ. ಇಂತಹ ಹೆಸರಾಂತ ಗಾಯಕಿ ಬಗ್ಗೆ ತಿಳಿಯದೇ ಇರುವ ಎಷ್ಟೋ ಸಂಗತಿಗಳಿವೆ. ಅವು ಯಾವುವು ಗೊತ್ತೆ?
Advertisement
Advertisement
ಕಲಾವಿದರ ಕುಟುಂಬದ ಮಗಳು ಲತಾ ಮಂಗೇಶ್ಕರ್
ಲತಾ ಮಂಗೇಶ್ಕರ್ ಅವರು ಕಲಾವಿದರ ಕುಟುಂಬದ ಮಗಳು. ಅವರ ತಂದೆ ನಾಟಕ ಕಂಪೆನಿಯನ್ನು ನಡೆಸುತ್ತಿದ್ದರು. ಹೀಗಾಗಿ ಲತಾ ಅವರು ಸಂಗೀತದ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಲತಾ ಮಂಗೇಶ್ಕರ್ ಅವರ ತಂದೆ, ರಾಗ ಅಭ್ಯಾಸಕ್ಕೆ ಶಿಷ್ಯನಿಗೆ ಹೇಳಿದ್ದರು. ಶಿಷ್ಯ ರಾಗವನ್ನು ತಪ್ಪಾಗಿ ಹಾಡುತ್ತಿದ್ದಾಗ ಲತಾ ಮಂಗೇಶ್ಕರ್ ಸರಿಪಡಿಸಲು ಸಲಹೆ ನೀಡುತ್ತಿದ್ದರು. ತನ್ನ ಮಗಳಲ್ಲೇ ಗಾಯನ ಕಲೆ ಅಡಗಿದೆ ಎಂಬುದನ್ನು ಅವರ ತಂದೆ ಆಗ ಅರಿತಿದ್ದರು. ಇದನ್ನೂ ಓದಿ: ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಇನ್ನಿಲ್ಲ
Advertisement
ಮೊದಲ ಗಾಯನ ಸಿನಿಮಾದಿಂದ ಹೊರಕ್ಕೆ
ಲತಾ ಮಂಗೇಶ್ಕರ್ ಅವರು ತಮ್ಮ ಸುಮಧುರ ಕಂಠದ ಮೂಲಕವೇ ಪ್ರಪಂಚದಾದ್ಯಂತ ಹೆಸರು ಮಾಡಿದ್ದಾರೆ. ಆದರೆ ಅವರು ಗಾಯನ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಿ ಹೊಸದರಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದರು. ಅವರು ಹಾಡಿದ್ದ ಮೊದಲ ಗಾಯನವನ್ನು ಸಿನಿಮಾದಿಂದ ತೆಗೆದುಹಾಕಲಾಗಿತ್ತು. ʼನಾಚು ಯಾ ಗದೆ, ಖೇಲು ಸಾರಿ ಮಣಿ ಹೌಸ್ ಭಾರಿʼ ಹಾಡನ್ನು 1942ರಲ್ಲಿ ಕಿತಿ ಹಸಾಲ್ ಎಂಬ ಮರಾಠಿ ಚಲನಚಿತ್ರಕ್ಕಾಗಿ ಧ್ವನಿಮುದ್ರಿಸಿದ್ದರು. ಆದರೆ ದುರದೃಷ್ಟವಶಾತ್ ಚಿತ್ರದ ಅಂತಿಮ ಕಟ್‌ನಿಂದ ಹಾಡನ್ನು ತೆಗೆದು ಹಾಕಲಾಗಿತ್ತು.
Advertisement
ಹಾಡುವಾಗ ಮೂರ್ಛೆ ಹೋಗಿದ್ರು
ಸಂಗೀತ ಸಂಯೋಜಕ ನೌಶಾದ್ ಅವರೊಂದಿಗೆ ಹಾಡು ರೆಕಾರ್ಡ್ ಮಾಡುವಾಗ ಲತಾ ಅವರು ಒಮ್ಮೆ ಮೂರ್ಛೆ ಹೋಗಿದ್ದರು. ಫಸ್ಟ್‌ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಹೇಳಿಕೊಂಡಿದ್ದರು. ನಾವು ಸುದೀರ್ಘ ಬೇಸಿಗೆಯ ಮಧ್ಯಾಹ್ನದ ಸಮಯದಲ್ಲಿ ಹಾಡನ್ನು ರೆಕಾರ್ಡ್ ಮಾಡುತ್ತಿದ್ದೆವು. ಮುಂಬೈ ಬೇಸಿಗೆ ಸಂದರ್ಭದಲ್ಲಿ ರೆಕಾರ್ಡಿಂಗ್ ಸ್ಟುಡಿಯೋಗಳಲ್ಲಿ ಹವಾನಿಯಂತ್ರಣ ಇರಲಿಲ್ಲ. ರೆಕಾರ್ಡಿಂಗ್ ಸಮಯದಲ್ಲಿ ಫ್ಯಾನ್ ಕೂಡ ಆಫ್ ಮಾಡಲಾಗಿತ್ತು. ಆಗ ನಾನು ಮೂರ್ಛೆ ಹೋಗಿದ್ದೆ ಎಂದು ಹೇಳಿಕೊಂಡಿದ್ದಾರೆ.
ತಮ್ಮ ಹಾಡನ್ನು ಎಂದಿಗೂ ಕೇಳಿರಲಿಲ್ವಂತೆ ಲತಾ
ಲತಾ ಮಂಗೇಶ್ಕರ್ ಒಮ್ಮೆ ಬಾಲಿವುಡ್ ಹಂಗಾಮಾದೊಂದಿಗೆ ಮಾತನಾಡುವಾಗ, ನಾನು ನನ್ನ ಹಾಡುಗಳನ್ನು ಕೇಳುತ್ತಿರಲಿಲ್ಲ. ಮತ್ತೆ ಕೇಳಿದರೆ, ಹಾಡಿನಲ್ಲಿ ನೂರು ತಪ್ಪುಗಳ ಕಂಡುಬರಬಹುದು ಎಂಬ ಕಾರಣಕ್ಕೆ ಕೇಳುತ್ತಿರಲಿಲ್ಲವಂತೆ. ಇದನ್ನೂ ಓದಿ: ಕನ್ನಡಕ್ಕೂ ದನಿಗೂಡಿಸಿದ್ದ ಲತಾ ಮಂಗೇಶ್ಕರ್
ಮಂಗೇಶ್ಕರ್ ನೆಚ್ಚಿನ ಸಂಗೀತ ನಿರ್ದೇಶಕ ಮದನ್ ಮೋಹನ್
ಲತಾ ಮಂಗೇಶ್ಕರ್ ಅವರ ನೆಚ್ಚಿನ ಸಂಗೀತ ನಿರ್ದೇಶಕ ಮದನ್ ಮೋಹನ್. ಸಹೋದರ-ಸಹೋದರಿಯಂತೆ ಇಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದೆವು ಎಂದು ಲತಾ ಅವರೊಮ್ಮೆ ನೆನಪಿಸಿಕೊಂಡಿದ್ದರು.
ರಾಜಕೀಯ ಜೀವನದಲ್ಲೂ ಛಾತಿ ಮೂಡಿಸಿದ್ದ ಲತಾ
ಲತಾ ಮಂಗೇಶ್ಕರ್ ಅವರು ರಾಜಕೀಯ ಜೀವನದಲ್ಲೂ ಛಾತಿ ಮೂಡಿಸಿದ್ದರು. 1999ರಿಂದ 2005ರವರೆಗೆ ರಾಜ್ಯಸಭಾ ಸದಸ್ಯೆಯಾಗಿ (ಸಂಸದೆ) ಕೆಲಸ ಮಾಡಿದ್ದರು. 1999ರಲ್ಲಿ ಅವರನ್ನು ರಾಜ್ಯಸಭಾಗೆ ನಾಮನಿರ್ದೇಶನ ಮಾಡಲಾಗಿತ್ತು. ಅಧಿಕಾರ ನನಗೆ ಇಷ್ಟವಿರಲಿಲ್ಲ ಎಂದು ಸಹ ಹೇಳಿಕೊಂಡಿದ್ದರು.
ಭಾರತದ ಗಡಿಯಾಚೆಗಿನ ಖ್ಯಾತಿ
ಲತಾ ಅವರು ಕೇವಲ ಭಾರತೀಯ ಗಾಯನ ದಂತಕಥೆಯಾಗಿರಲಿಲ್ಲ. ಅವರ ಸುಮಧುರ ಕಂಠದ ಪ್ರೇಮಿಗಳನ್ನು ಪ್ರಪಂಚದಾದ್ಯಂತ ಕಾಣಬಹುದು. ಲಂಡನ್‌ನ ಪ್ರತಿಷ್ಠಿತ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ಪ್ರದರ್ಶನ ನೀಡಿದ ಮೊದಲ ಭಾರತೀಯ ಎಂಬ ಗೌರವವನ್ನು ಪಡೆದಿದ್ದಾರೆ. ಫ್ರಾನ್ಸ್ ಸರ್ಕಾರವು 2007ರಲ್ಲಿ ಅವರಿಗೆ ಲಿಜಿನ್ ಆಫ್ ಹಾನರ್ ನೀಡಿ ಗೌರವಿಸಿತ್ತು. ಇದು ಆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್
1974ರ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಆವೃತ್ತಿಯು ಲತಾ ಮಂಗೇಶ್ಕರ್ ಅವರನ್ನು ಅತಿ ಹೆಚ್ಚು ರೆಕಾರ್ಡ್ ಮಾಡಿದ ಕಲಾವಿದೆ ಎಂದು ಪಟ್ಟಿ ಮಾಡಿದೆ.
ಒಪಿ ನಯ್ಯರ್ ಜೊತೆ ಸಂಗೀತ ಕೆಲಸ ಮಾಡಿಲ್ಲ
ಲತಾ ಮಂಗೇಶ್ಕರ್ ಅವರು ವೃತ್ತಿ ಜೀವನದಲ್ಲಿ ಭಾರತೀಯ ಶ್ರೇಷ್ಠ ಸಂಗೀತ ಸಂಯೋಜಕರು, ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ಆದರೆ ಎಂದಿಗೂ ಒಪಿ ನಯ್ಯರ್ ಜೊತೆ ಅವರು ಸಂಗೀತ ಕೆಲಸ ಮಾಡಲಾಗಲಿಲ್ಲ. ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ
2015ರ ನಂತರ ಹಾಡುವುದನ್ನು ನಿಲ್ಲಿಸಿದ್ದ ಮಂಗೇಶ್ಕರ್
ಅನಾರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ಲತಾ ಮಂಗೇಶ್ಕರ್ ಅವರು 2015ರ ನಂತರ ಅವರು ಹಾಡುವುದನ್ನೇ ನಿಲ್ಲಿಸಿದರು. ಅವರ ಕೊನೆಯ ಹಾಡು 2015ರಲ್ಲಿ ರೆಕಾರ್ಡ್ ಮಾಡಲಾಗಿತ್ತು.