ಚೆನ್ನೈ: ಚಳುವಳಿ, ಜನಸೇವೆ, ರಾಜಕೀಯ ಎಂದು ಹೇಳಿ 80 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ 94 ವರ್ಷದ ಮುತ್ತುವೇಲು ಕರುಣಾನಿಧಿ ಇನ್ನು ನೆನಪು ಮಾತ್ರ.
ಮಂಗಳವಾರ ಸಂಜೆ 6.10ಕ್ಕೆ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದ ತಮಿಳುನಾಡಿನ ಸೂರ್ಯ ಕರುಣಾನಿಧಿ ಅವರನ್ನು ಇವತ್ತು ಸಂಜೆ 7 ಗಂಟೆಯ ವೇಳೆಗೆ 21 ಸುತ್ತು ಕುಶಾಲುತೋಪು ಸಿಡಿಸಿ, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯ್ತು.
Advertisement
ರಾಜಕೀಯ ಗುರು ಅಣ್ಣಾದೊರೆ ಹಾಗೂ ರಾಜಕೀಯ ಶತ್ರು ಜಯಲಲಿತಾ ಇಬ್ಬರ ನಡುವೆ ಕರುಣಾನಿಧಿಯನ್ನು ಕಣ್ಣಡಕ ಸಮೇತ ಮಣ್ಣು ಮಾಡಲಾಯ್ತು. ತಂದೆಯ ಅಂತ್ಯಸಂಸ್ಕಾರದ ವೇಳೆ ಇಡೀ ಕುಟುಂಬ ವರ್ಗ ಕಣ್ಣೀರಲ್ಲಿ ಮುಳುಗಿತ್ತು. ಉತ್ತರಾಧಿಕಾರಿ ಸ್ಟಾಲಿನ್ ವಿಚಲಿತರಾಗಿದ್ದು, ದುಃಖದ ಮಡುವಿನಲ್ಲಿದ್ದರು.
Advertisement
Advertisement
ಸರ್ಕಾರದ ಪ್ರತಿನಿಧಿಯಾಗಿ ಸಚಿವ ಜಯಕುಮಾರ್ ಮಾತ್ರ ಭಾಗಿಯಾಗಿದ್ದರು. ಮಾಜಿ ಪ್ರಧಾನಿ ದೇವೇಗೌಡ್ರು ಸೇರಿದಂತೆ ಗಣ್ಯಾತಿಗಣ್ಯರು ಅಂತಿಮ ಅಶುತರ್ಪಣ ಅರ್ಪಿಸಿದರು ಈ ಮೂಲಕ, 1924ರಲ್ಲಿ ಜನಿಸಿದ್ದ ದ್ರಾವಿಡರ ಧೀಮಂತ ನಾಯಕ ಇತಿಹಾಸದ ಪುಟಗಳಲ್ಲಿ ಸೇರಿದರು. ಸಾವಿರಾರು ಮಂದಿ ಅಭಿಮಾನಿಗಳು, ಕಾರ್ಯಕರ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಕಲೈನರ್ ಅವರ ಸ್ಮಾರಕ ಸಹ ನಿರ್ಮಾಣವಾಗಲಿದೆ.
Advertisement
ರಾಜಾಜಿಹಾಲ್‍ನಲ್ಲಿ ಸಾರ್ವಜನಿಕ ದರ್ಶನ ಮುಗಿದ ಬಳಿಕ ಮಧ್ಯಾಹ್ನ 4.30ರ ಹೊತ್ತಿಗೆ ಪುಷ್ಪಾಂಲಕೃತ ವಾಹನದಲ್ಲಿ ಕರುಣಾನಿಧಿ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಯ್ತು. ರಾಜಾಜಿಹಾಲ್‍ನಿಂದ ಮರೀನಾಬೀಚ್‍ಗೆ 3 ಕಿ.ಮೀ ಇರೋ ದೂರವನ್ನ ಸುಮಾರು 2 ತಾಸು ಸಾಗಬೇಕಾಯ್ತು. ಅಷ್ಟರ ಮಟ್ಟಿಗೆ ಜನಸಮೂಹ ಸೇರಿತ್ತು. ಮೂರು ಕಿ.ಮೀ. ಹಾದಿಯುದ್ದಕ್ಕೂ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ಕಿಕ್ಕಿರಿದು ಜನ ಸೇರಿತ್ತು. ಮಾರ್ಗದುದ್ದಕ್ಕೂ ಅಭಿಮಾನಿಗಳು ಭಾವಚಿತ್ರ ಸೇರಿದಂತೆ ವಿವಿಧ ರೀತಿಯಲ್ಲಿ ತಮ್ಮ ಅಭಿಮಾನ ತೋರ್ಪಡಿಸಿದರು. ಮಹಿಳೆಯರಂತೂ ಕಣ್ಣೀರ ಕೋಡಿಯನ್ನೇ ಹರಿಸಿದರು.
ಶವದ ಪೆಟ್ಟಿಗೆಯಲ್ಲಿ ಇಟ್ಟು ಅಂತ್ಯಕ್ರಿಯೆ:
ಹಿಂದೂ ಸಂಸ್ಕೃತಿಯಲ್ಲಿ ಶವವನ್ನು ಸುಡಲಾಗುತ್ತದೆ. ಆದರೆ ಕರುಣಾನಿಧಿ ಹಿಂದೂವಾಗಿ ಹುಟ್ಟಿದ್ದರೂ ಶವದ ಪೆಟ್ಟಿಗೆಯಲ್ಲಿ ಇಟ್ಟು ದ್ರಾವಿಡ ಪದ್ಧತಿಯಂತೆ ಅಂತ್ಯಕ್ರಿಯೆ ಮಾಡಲಾಯಿತು. ಕರುಣಾನಿಧಿ ಅನೇಕ ಬಾರಿ ನಾನು ನಾಸ್ತಿಕ ಎಂದು ಹೇಳಿಕೊಂಡಿದ್ದರು.
ದ್ರಾವಿಡ ಸಂಸ್ಕೃತಿಯ ಪ್ರಕಾರ, ಮೃತದೇಹವನ್ನು ಹೂಳಲಾಗುತ್ತದೆ. ಈ ಕಾರಣಕ್ಕಾಗಿ ಶ್ರೀಂಗಂಧದಿಂದ ವಿಶೇಷವಾದ ಶವಪೆಟ್ಟಿಗೆಯನ್ನು ನಿರ್ಮಿಸಲಾಗಿತ್ತು. ಕರುಣಾನಿಧಿ ಅವರ ಅಂತ್ಯಕ್ರಿಯೆಗೆ ಸಿದ್ಧವಾಗಿರುವ ಶವದ ಪೆಟ್ಟಿ ಅನೇಕ ವಿಶೇಷತೆಗಳಿಂದ ಕೂಡಿತ್ತು. ಜೊತೆಗೆ ಅದರ ಮೇಲೆ ‘ಬಿಡುವಿಲ್ಲದೇ ದುಡಿದವ ಇದರಲ್ಲಿ ವಿಶ್ರಮಿಸುತ್ತಿದ್ದಾನೆ’ ಎಂದು ತಮಿಳು ಭಾಷೆಯಲ್ಲಿ ಬರೆಯಲಾಗಿತ್ತು. ಶವಪೆಟ್ಟಿಗೆಯ ಒಳಗಡೆ ಸಂಪೂರ್ಣವಾಗಿ ಬಿಳಿ ರೇಷ್ಮೆಯಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ರೇಷ್ಮೆಯಿಂದಲೇ ಮಲಗುವ ಜಾಗದಲ್ಲಿ ಮೆತ್ತನೆಯ ಹಾಸಿಗೆ ಹಾಗೂ ತಲೆ ದಿಂಬು ಇಡಲಾಗಿತ್ತು. ಪೆಟ್ಟಿಗೆಯ ಅಂಚಿನಲ್ಲಿ ಕೆಂಪು ರೇಷ್ಮೆ ಏಳೆಯಿಂದ ಅಲಂಕಾರ ಮಾಡಲಾಗಿತ್ತು.
ಗಣ್ಯರಿಂದ ಕಂಬನಿ:
ಸಂಜೆ 4 ಗಂಟೆವರೆಗೆ ಕರುಣಾನಿಧಿಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕ ದರ್ಶನಕ್ಕಿಟ್ಟಿದ್ದ ರಾಜಾಜಿಹಾಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಪಳನಿಸ್ವಾಮಿ, ಡಿಸಿಎಂ ಪನ್ನೀರ್‍ಸೆಲ್ವಂ, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೇರಳ ಸಿಎಂ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಕಾಂಗ್ರೆಸ್ ಮುಖಂಡ ಗುಲಾಂ ನಬೀ ಆಜಾದ್, ಸಂಸದ ವೀರಪ್ಪ ಮೊಯ್ಲಿ, ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಅಂತಿಮ ನಮನ ಸಲ್ಲಿಸಿದ್ರು.
ನಟರಾದ ರಜನಿಕಾಂತ್, ಕಮಲ್ ಹಾಸನ್ ಸಹ ಶ್ರದ್ಧಾಂಜಲಿ ಅರ್ಪಿಸಿದ್ರು. ಬೆಳಗ್ಗೆಯೇ ಸಂತಾಪ ಸೂಚಿಸಿ ಸಂಸತ್ ಕಲಾಪವನ್ನು ನಾಳೆಗೆ ಮುಂದೂಡಲಾಯ್ತು. ನನಗೂ ಅಪ್ಪನ ಸ್ಥಾನದಲ್ಲಿದ್ದರು ಅಂತ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ರು. ಇತ್ತ, ರಾಜ್ಯದಲ್ಲಿ ವಿಧಾನಸೌಧ, ಹೈಕೋರ್ಟ್ ಮೇಲಿರೋ ತ್ರಿವರ್ಣ ಧ್ವಜ ಅರ್ಧಕ್ಕೆ ಇಳಿಸಿ ಗೌರವ ಸೂಚಿಸಲಾಯಿತು. ಈ ಮಧ್ಯೆ, ಕರುಣಾನಿಧಿ ನಿಧನಕ್ಕೆ ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಪ್ರಧಾನಿ ವಿಕ್ರಮಸಿಂಘೆ, ಮಾಜಿ ಅಧ್ಯಕ್ಷ ರಾಜಪಕ್ಸ ಸಹ ಕಂಬನಿ ಮಿಡಿದಿದ್ದಾರೆ.