ಮೈಸೂರು: ಆಷಾಢ ಮಾಸದ ಇಂದು ಕೊನೆಯ ಶುಕ್ರವಾರವಾಗಿರುವ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಹಸ್ರಾರು ಭಕ್ತರು ಆಗಮಿಸಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಗಿತ್ತು. ಬೆಳಗ್ಗಿನಿಂದಲೇ ದೇವಿಯ ದರ್ಶನಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಭಕ್ತರಿಗೆ ಸುಲಭವಾಗಿ ದರ್ಶನ ಮಾಡಲು ಅನುವು ಮಾಡಿಕೊಡಲಾಗಿತ್ತು. ವಿಶೇಷ ಪೂಜೆ ಹಿನ್ನೆಲೆಯಲ್ಲಿ ಇಂದು ದೇವಿಗೆ ವಿಶೇಷ ಅಲಂಕಾರ ಕೂಡ ಮಾಡಲಾಗಿತ್ತು.
Advertisement
Advertisement
ಬೆಳಗ್ಗೆ 3.30ರ ವೇಳೆಗೆ ದೇವಿಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ದುರ್ಗೆಗೆ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 5.15 ರಿಂದಲೇ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, 9.30ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ಸಂಜೆಯವರೆಗೂ ದರ್ಶನ ವ್ಯವಸ್ಥೆ ಮುಂದುವರಿಯಲಿದ್ದು, ಸಂಜೆ 6.30ಕ್ಕೆ ಅಭಿಷೇಕ ಹಾಗೂ 10.30ರ ವರೆಗೂ ದೇವಿಯ ದರ್ಶನಕ್ಕೆ ಆಗಮಿಸಬಹುದು ಎಂದು ದೇವಾಲಯದ ಅರ್ಚಕರು ಮಾಹಿತಿ ನೀಡಿದ್ದಾರೆ.
Advertisement
ಬೆಳ್ಳಂಬೆಳಗ್ಗೆ ತಂಪಾದ ವಾತಾವರಣದಲ್ಲಿ ಭಕ್ತರು ಬೆಟ್ಟದ ಮೆಟ್ಟಿಲು ಹತ್ತಿ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಿದ್ದು ಸಾಮಾನ್ಯವಾಗಿತ್ತು. ಹೆಚ್ಚಿನ ಭಕ್ತರು ಭೇಟಿ ನೀಡುವ ನಿರೀಕ್ಷೆಯಿದ್ದ ಹಿನ್ನೆಲೆಯಲ್ಲಿ ಭಕ್ತರ ದರ್ಶನಕ್ಕೆ ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಇಂದು ವಿಶೇಷ ದಿನದ ಹಿನ್ನೆಲೆಯಲ್ಲಿ ಸುಮಾರು 2 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ.