ಹಾಸನ: ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ಇಂದು ಕಡೆಯ ದಿನವಾಗಿದ್ದು, ಮಂಗಳವಾರ ಮಧ್ಯಾಹ್ನ ಗರ್ಭಗುಡಿ ಬಾಗಿಲನ್ನು ಮುಚ್ಚಲಾಗುತ್ತದೆ.
ಅಕ್ಟೋಬರ್ 17ರಂದು ತೆರೆದಿದ್ದ ಹಾಸನಾಂಬ ದೇವಾಲಯ ಬಾಗಿಲು ಅಕ್ಟೋಬರ್ 29ರಂದು ಮುಚ್ಚುತ್ತಾರೆ. ಮೂರು ದಿನಗಳಿಂದ ದೇವಿ ದರ್ಶನಕ್ಕೆ ಭಕ್ತ ಸಾಗರ ಹರಿದುಬಂದಿದ್ದು, ಅಂದಾಜು ನಾಲ್ಕು ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ.
ಈ ಬಾರಿ 13 ದಿನಗಳ ಕಾಲ ಹಾಸನಾಂಬೆ ದರ್ಶನ ನೀಡಿದ್ದಾಳೆ. ಮೊದಲ ದಿನ ಭಕ್ತರಿಗೆ ದೇವಿಯ ದರ್ಶನ ಇರಲಿಲ್ಲ. ಹಾಗೆಯೇ ಕೊನೆಯ ದಿನ ಕೂಡ ಭಕ್ತರಿಗೆ ದೇವಿಯ ದರ್ಶನ ಇರುವುದಿಲ್ಲ. ಉಳಿದಂತೆ ಎಲ್ಲ ದಿನಗಳಲ್ಲಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಅಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30ಕ್ಕೆ ದೇವಿಯ ಗರ್ಭಗುಡಿ ಬಾಗಿಲು ತೆರೆದಿತ್ತು. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದಲೂ ದೇವಿಯ ದರ್ಶನಕ್ಕಾಗಿ ಭಕ್ತಸಾಗರ ಹರಿದು ಬಂದಿತ್ತು. ವರ್ಷಕ್ಕೊಮ್ಮೆ ಮಾತ್ರ ಹಾಸನಾಂಬೆ ದೇವಿ ದರ್ಶನ ಭಾಗ್ಯ ಕರುಣಿಸುತ್ತಾಳೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಭಕ್ತರು ದೇವಿಯ ದರ್ಶನವನ್ನು ಪಡೆಯಲು ಆಗಮಿಸುತ್ತಾರೆ.
ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 3.30 ರಿಂದ ದಿನ ಮುಕ್ತಾಯದವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿಶೇಷ ದರ್ಶನಕ್ಕಾಗಿ 300 ಹಾಗೂ 1,000 ರೂ. ಗಳ ಟಿಕೆಟ್ ದರವನ್ನು ನಿಗದಿಪಡಿಸಲಾಗಿತ್ತು.
ಜಿಲ್ಲಾಡಳಿತ ಭಕ್ತರಿಗೆ ಅಗತ್ಯವಿರುವ ಎಲ್ಲ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ದೇವಾಲಯದ ಒಳಗೆ ಹಾಗೂ ಸುತ್ತಮುತ್ತ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ದೇವಿಯ ಸುಗಮ ದರ್ಶನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.