ಕಾಶ್ಮೀರದಲ್ಲಿ ಬಸ್‌ ಉರುಳಿಸಿ 9 ಮಂದಿ ತೀರ್ಥಯಾತ್ರಿಗಳನ್ನು ಹತೈಗೈದ ಉಗ್ರ ಪಾಕ್‌ನಲ್ಲಿ ಮಟಾಷ್‌

Public TV
2 Min Read
Lashkar e Taiba terrorist Abu Qatal

ಇಸ್ಲಾಮಾಬಾದ್‌: ರಿಯಾಸಿ ಬಸ್‌ ಮೇಲಿನ ದಾಳಿಯ (Reasi Attack) ಮಾಸ್ಟರ್‌ ಮೈಂಡ್‌, ಲಷ್ಕರ್-ಎ-ತೈಬಾ ಉಗ್ರ ಸಂಘಟನೆಯ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅಬು ಕತಾಲ್‌ನನ್ನು (Abu Qatal) ಶನಿವಾರ ರಾತ್ರಿ ಪಾಕಿಸ್ತಾನದಲ್ಲಿ (Pakistan) ಹತ್ಯೆ ಮಾಡಲಾಗಿದೆ.

ಅಬು ಕತಾಲ್ ತನ್ನ ಭದ್ರತಾ ಸಿಬ್ಬಂದಿಯೊಂದಿಗೆ ಸಂಜೆ 7 ಗಂಟೆ ಸುಮಾರಿಗೆ ಝೀಲಂ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದಾಗ ಅಪರಿಚಿತ ದಾಳಿಕೋರರು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ದಾಳಿಕೋರರು 15 ರಿಂದ 20 ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯಿಂದ ಅಬು ಕತಾಲ್ ಮತ್ತು ಆತನ ಓರ್ವ ಭದ್ರತಾ ಸಿಬ್ಬಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತ್ತೊಬ್ಬ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾನೆ.

ಅಬು ಕತಾಲ್‌ಗೆ ಪಾಕ್‌ ಸೇನೆಯೇ (Pak Army) ರಕ್ಷಣೆ ನೀಡಿತ್ತು. ಸರಳ ಉಡುಪಿನಲ್ಲಿ ಮಿಲಿಟರಿ ಸಿಬ್ಬಂದಿಯೇ ಈತನಿಗೆ ರಕ್ಷಣೆ ನೀಡುತ್ತಿದ್ದರು.

ರಿಯಾಸಿಯಲ್ಲಿ ಉಗ್ರರ ದಾಳಿಯಿಂದ ಕಣಿವೆ ಬಿದ್ದ ಯಾತ್ರಿಕರ ಬಸ್‌
ರಿಯಾಸಿಯಲ್ಲಿ ಉಗ್ರರ ದಾಳಿಯಿಂದ ಕಣಿವೆ ಬಿದ್ದ ಯಾತ್ರಿಕರ ಬಸ್‌

ಮುಂಬೈ ಭಯೋತ್ಪಾದಕ (Mumbai Attack) ದಾಳಿಯ ಸಂಚುಕೋರ ಹಫೀಜ್ ಸಯೀದ್‌ನ(Hafiz Saeed) ಆಪ್ತ ಸಹಾಯಕನಾಗಿದ್ದ ಅಬು ಕತಾಲ್ ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇವಸ್ಥಾನದಿಂದ ಹಿಂದಿರುಗುತ್ತಿದ್ದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ.

ಅಬು ಕತಾಲ್‌ನನ್ನು ಲಷ್ಕರ್‌  ತಂಡದ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿ ಹಫೀಜ್ ಸಯೀದ್ ನೇಮಿಸಿದ್ದ. ನಂತರ ಕಾಶ್ಮೀರದಲ್ಲಿ ಪ್ರಮುಖ ದಾಳಿಗಳನ್ನು ನಡೆಸಲು ಅಬು ಕತಾಲ್‌ಗೆ ಹಫೀಜ್ ಸಯೀದ್ ಆದೇಶ ನೀಡುತ್ತಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಸಮುದಾಯ ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಅಬು ಕತಾಲ್‌ ಉಗ್ರರನ್ನು ನೇಮಿಸುತ್ತಿದ್ದ.

Reasi Terror Attack
ರಿಯಾಸಿಯಲ್ಲಿ ಉಗ್ರರ ದಾಳಿಯಿಂದ ಕಣಿವೆ ಬಿದ್ದ ಯಾತ್ರಿಕರ ಬಸ್‌

ಏನಿದು ರಿಯಾಸಿ ದಾಳಿ?
ಮಾತಾ ವೈಷ್ಣೋದೇವಿ ದೇಗುಲಕ್ಕೆ (Mata Vaishno Devi Temple) ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಕಳೆದ ವರ್ಷದ ಜೂನ್ 9 ರಂದು ದಾಳಿ ನಡೆದಿತ್ತು. ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ 53 ಆಸನಗಳ ಬಸ್ ಶಿವ ಖೋರಿ ದೇವಸ್ಥಾನದಿಂದ ಕತ್ರಾದಲ್ಲಿರುವ ಮಾತಾ ವೈಷ್ಣೋದೇವಿ ದೇಗುಲಕ್ಕೆ ತೆರಳುತ್ತಿದ್ದಾಗ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು.

ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿ 41 ಮಂದಿ ಗಾಯಗೊಂಡಿದ್ದರು. ಬಸ್‌ ಪ್ರಪಾತಕ್ಕೆ ಬಿದ್ದ ಬಳಿಕವೂ ಉಗ್ರರು ದಾಳಿ ನಡೆಸಿ ಅಟ್ಟಹಾಸ ಮೆರೆದಿದ್ದರು.

 

Share This Article