ವಿಯೆಂಟಿಯಾನ್: ಲಾವೋಸ್ ನಲ್ಲಿ ನಿರ್ಮಾಣ ಹಂತದಲ್ಲಿದ್ದ ಹೈಡ್ರೋ ಪವರ್ ಡ್ಯಾಂ ಒಡೆದ ಪರಿಣಾಮ 20 ಜನ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಜನರು ಪ್ರಾಣ ಉಳಿಸಿಕೊಳ್ಳಲು ಮೇಲ್ಛಾವಣಿ ಹತ್ತಿ ಕುಳಿತಿದ್ದಾರೆ.
ಅಟ್ಟಪೇಯಿ ಪ್ರಾಂತ್ಯದಲ್ಲಿ ಕ್ಷಿ ಪೇನ್ ನದಿಗೆ ಕಟ್ಟಲಾಗಿದ್ದ ಡ್ಯಾಂ ಒಡೆದಿದ್ದು, ಸುಮಾರು 7 ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ. ಅಂದಾಜು 6,600 ಜನರು ವಸತಿ ಹೀನರಾಗಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಬಿತ್ತರಿಸಿವೆ. ಸೋಮವಾರ ಡ್ಯಾಂ ಕುಸಿತವಾಗಿದ್ದು, ಸ್ಥಳೀಯ ಸರ್ಕಾರ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಮೇಲ್ಛಾವಣಿ ಮೇಲೆ ನಿಂತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Advertisement
ದಕ್ಷಿಣ ಕೊರಿಯಾದ ಕಂಪೆನಿಯೊಂದು ಅಣೆಕಟ್ಟು ನಿರ್ಮಾದ ಹೊಣೆ ಹೊತ್ತಿದ್ದು, ಈ ಡ್ಯಾಂನಲ್ಲಿ ಉತ್ಪಾದನೆಯಾದ ಜಲ ವಿದ್ಯುತ್ ಅನ್ನು ಥಾಯ್ಲೆಂಡ್ ಮತ್ತು ದಕ್ಷಿಣ ಕೊರಿಯಾಗಳಲ್ಲಿರುವ ಉದ್ಯಮಗಳಿಗೆ ನೀಡಲಾಗುತಿತ್ತು. ಕ್ಷಿ ಪೇನ್ ನದಿಗೆ ಒಟ್ಟು ಮೂರು ಆಣೆಕಟ್ಟುಗಳನ್ನು ಕಟ್ಟಲಾಗಿದೆ.
Advertisement
Advertisement
ಅಣೆಕಟ್ಟು ಒಡೆದಿದ್ದು ಹೇಗೆ?
ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಅಣೆಕಟ್ಟಿನ ಗೋಡೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಬಿರುಕು ಸರಿಮಾಡಲು ಆಡಳಿತ ಮಂಡಳಿ ರಿಪೇರಿ ಕೆಲಸ ಆರಂಭಿಸಿತ್ತು. ಆದ್ರೆ ಲಾವೋಸ್‍ನಲ್ಲಿ ಸತತವಾಗಿ ಮಳೆ ಸುರಿಯುತ್ತಿರೋದ್ರಿಂದ ಕೆಲಸ ವಿಳಂಬವಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ನದಿ ತೀರದ ಪ್ರದೇಶದ ಜನರಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದರು.
Advertisement
ಸೋಮವಾರ ಮಧ್ಯಾಹ್ನ ಜಲಾಶಯದಿಂದ ಒಂದು ಗೇಟ್ ಮೂಲಕ ನೀರನ್ನು ಹೊರ ಬಿಡಲಾಯಿತು. ಇದೇ ವೇಳೆ ಸ್ಥಳೀಯ ಸರ್ಕಾರ ಎಚ್ಚರಿಕೆಯಾಗಿ ಜನರನ್ನು ಸ್ಥಳಾಂತರಿಸುವಂತೆ ಆದೇಶವನ್ನು ನೀಡಿತ್ತು. ಸೋಮವಾರ ಸಂಜೆ 6 ಗಂಟೆಗೆ ಡ್ಯಾಂ ಸಂಪೂರ್ಣವಾಗಿ ಶಿಥಿಲಗೊಂಡಿದೆ ಎಂಬುದು ಅಧಿಕಾರಿಗಳಿಗೆ ಖಾತ್ರಿಯಾಗಿತ್ತು. ಮಂಗಳವಾರ ಬೆಳಗಿನ ಜಾವ 1.30ಕ್ಕೆ ಡ್ಯಾಂ ಒಡೆದು ಅಚ್ಚುಕಟ್ಟು ಪ್ರದೇಶಗಳಿಗೆ ನೀರು ನುಗ್ಗಿದೆ.
ಸತತವಾಗಿ ಮಳೆಯಾಗುತ್ತಿರುವ ಪರಿಣಾಮ ಅಣೆಕಟ್ಟು ಒಡೆದು ಹೋಗಿದೆ. ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಯಾಗಿದ್ದರಿಂದ, ಡ್ಯಾಂ ತಡೆಗೋಡೆ ಮೇಲೆ ನಿರಂತರ ಒತ್ತಡ ಉಂಟಾಗಿತ್ತು ಎಂದು ಅಣೆಕಟ್ಟು ನಿರ್ಮಾಣ ವಹಿಸಿದ್ದ ಕಂಪೆನಿ ಹೇಳಿದೆ.
ಲಾವೋಸ್ ಪ್ರಧಾನಿ ಥೊಂಗ್ಲೋನ್ ಸಿಸೌಲಿತ್ ತಮ್ಮ ಎಲ್ಲ ಪ್ರವಾಸ ಹಾಗು ಸಭೆಗಳನ್ನು ರದ್ದುಗೊಳಿಸಿ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿಯನ್ನು ಪಡೆಯುತ್ತಿದ್ದಾರೆ. ರಕ್ಷಣಾ ಕಾರ್ಯ ನಡೆಸುವಂತೆ ಎಲ್ಲ ಅಧಿಕಾರಿಳಿಗೂ ಆದೇಶಿಸಿದ್ದಾರೆ.