ಶ್ರೀಲಂಕಾ ಅಧ್ಯಕ್ಷರ ಮನೆ ಮುಂದೆಯೇ ಹಿಂಸಾತ್ಮಕ ಪ್ರತಿಭಟನೆ – ವಾಹನಗಳು ಸುಟ್ಟು ಭಸ್ಮ

Public TV
1 Min Read
Shrilanka

ಕೊಲಂಬೊ: ಸುಮಾರು ಒಂದು ವಾರದಿಂದಲೂ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ತೈಲ ಪೂರೈಕೆಯಲ್ಲಿ ಕೊರತೆಯುಂಟಾಗಿದ್ದು ಡೀಸೆಲ್ ಮಾರಾಟವನ್ನೇ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರ ಆಕ್ರೋಶವು ಮಿತಿ ಮೀರಿದ್ದು, ಪ್ರತಿಭಟನೆ ಹಿಂಸಾತ್ಮಕ ರೂಪ ತಾಳಿದೆ.

ಅಗತ್ಯ ವಸ್ತುಗಳ ಬೆಲೆ ಹೆಚ್ಚಳ, ಅಡುಗೆ ಅನಿಲ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಗೆ ಲಂಕಾ ಅಧ್ಯಕ್ಷ ರಾಜಪಕ್ಸೆ ಅವರ ನೀತಿಗಳೇ ಕಾರಣ ಎಂದು ಆರೋಪಿಸಿ ಗುರುವಾರ ತಡರಾತ್ರಿ 5 ಸಾವಿರಕ್ಕೂ ಹೆಚ್ಚು ಮಂದಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ನಿವಾಸದ ಮುಂದೆ ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಅವರ ರಾಜೀನಾಮೆಗೂ ಒತ್ತಾಯಿಸಿರುವ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ಡೀಸೆಲ್‌ ಮಾರಾಟ ಸ್ಥಗಿತ- ಗ್ಯಾರೇಜ್‌ಗಳಲ್ಲಿರುವ ಬಸ್‌ಗಳಿಂದ ಇಂಧನ ತೆಗೆದು ಬಳಕೆ

Shrilanka

ಪ್ರತಿಭಟನೆಯನ್ನು ಹತ್ತಿಕ್ಕಲು ಅರೆಸೇನಾ ಪೊಲೀಸ್ ಘಟಕ, ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಸಿಡಿಸಲಾಗಿದೆ. ಆಕ್ರೋಶಭರಿತ ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಟಲಿ ಹಾಗೂ ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಐವರು ಪೊಲೀಸರಿಗೆ ಗಂಭೀರ ಗಾಯಗಳಾಗಿವೆ. ಅಲ್ಲದೆ ಪೊಲೀಸ್ ಜೀಪ್, 2 ಬೈಕ್‌ಗಳು ಹಾಗೂ ವಾಟರ್ ಕೆನನ್ ಟ್ರಕ್ ಅನ್ನು ಸುಟ್ಟುಹಾಕಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ಆರ್ಥಿಕ ನೆರವು ನೀಡಿದ ಭಾರತಕ್ಕೆ ಧನ್ಯವಾದ ಸಲ್ಲಿಸಿದ ಶ್ರೀಲಂಕಾ

Shrilanka

1948ರ ಸ್ವಾತಂತ್ರ‍್ಯದ ಬಳಿಕ ಶ್ರೀಲಂಕಾ ಸರ್ಕಾರ ಈಗ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಹಣದುಬ್ಬರದಿಂದ ಡೀಸೆಲ್ ಬೆಲೆ ದ್ವಿಗುಣವಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ 45 ಮಂದಿಯನ್ನು ಬಂಧಿಸಲಾಗಿದ್ದು, ಓರ್ವ ಮಹಿಳೆಯೂ ಇದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸರ್ಕಾರ, ಉಗ್ರಗಾಮಿಗಳ ಗುಂಪೊಂದು ಈ ರೀತಿಯ ಹಿಂಸಾತ್ಮಕ ಪ್ರತಿಭಟನೆಗೆ ಕರೆ ಕೊಟ್ಟಿದೆ. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರನ್ನು ಬಂಧಿಸಲಾಗಿದೆ ಎಂದು ಹೇಳಿದೆ.

 

Share This Article
Leave a Comment

Leave a Reply

Your email address will not be published. Required fields are marked *