ರಾಯಚೂರು: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಸುರಿದ ಮಳೆಯ ಪರಿಣಾಮ ದೇವದುರ್ಗ ತಾಲೂಕಿನ ಮಸಿದಾಪೂರ್ ಗ್ರಾಮದಲ್ಲಿ ಭೂ ಕುಸಿತವಾಗಿದೆ. ಮನೆಗಳಲ್ಲಿ ಕೋಣೆಗಳೇ ಕುಸಿದು ಹೋಗಿವೆ. ಗ್ರಾಮದ ಹನುಮಂತರೆಡ್ಡಿ ಎಂಬವರ ಮನೆಯ ಕೋಣೆಯಲ್ಲಿದ್ದ ಟೇಬಲ್, ಮಂಚ, ಖುರ್ಚಿಗಳನ್ನ ಭೂಮಿ ನುಂಗಿದೆ. 20 ಅಡಿಗೂ ಅಧಿಕ ಆಳದ ಗುಂಡಿಗಳು ಗ್ರಾಮದಲ್ಲಿ ನಿರ್ಮಾಣವಾಗಿವೆ. ಗ್ರಾಮದ ಬಯಲಿನಲ್ಲೂ ಭೂಕುಸಿವಾಗಿದ್ದ ಜನ ಆತಂಕದಲ್ಲಿ ಬದುಕುತ್ತಿದ್ದಾರೆ. ಸುಮಾರು 15 ಮನೆಗಳ ಗೋಡೆ ಕುಸಿದಿದೆ.
ಗ್ರಾಮದಲ್ಲಿ ಭೂಕುಸಿತ ಉಂಟಾಗಿರುವುದರಿಂದ ಗ್ರಾಮಸ್ಥರು ಊರು ಖಾಲಿ ಮಾಡುತ್ತಿದ್ದಾರೆ. ಗ್ರಾಮದ ಎಂಟತ್ತು ಕುಟುಂಬಗಳು ಮನೆಗೆ ಬೀಗ ಜಡಿದು ಗ್ರಾಮವನ್ನೇ ತೊರೆದಿವೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಭೂಕುಸಿತವಾಗುತ್ತಿರುವುದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮೂರು ವರ್ಷ ಕಳೆದರೂ ಭೂಕುಸಿತಕ್ಕೆ ಕಾರಣ ತಿಳಿದು ಸರ್ಕಾರ ಸಮಸ್ಯೆ ಪರಿಹರಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪ್ರಾಣಭೀತಿಯಲ್ಲಿ ಬದುಕುವಂತಾಗಿದೆ. ಅಂತರ್ಜಲ ಪ್ರಮಾಣ ಹೆಚ್ಚಾಗಿ ಭೂ ಕುಸಿತವಾಗುತ್ತಿದೆ ಎನ್ನಲಾಗುತ್ತಿದೆಯಾದ್ರೂ ಕಾರಣ ನಿಗೂಢವಾಗಿದೆ. ಗ್ರಾಮಕ್ಕೆ ಭೇಟಿ ನೀಡಿದರೂ ಯಾವ ಪರಿಹಾರವನ್ನ ಅಧಿಕಾರಿಗಳು ಸೂಚಿಸುತ್ತಿಲ್ಲ. ಗ್ರಾಮವನ್ನ ಸ್ಥಳಾಂತರವಾದ್ರೂ ಮಾಡುತ್ತಿಲ್ಲ ಅಂತ ಸರ್ಕಾರದ ವಿರುದ್ಧ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.
3 ವರ್ಷದ ಕೆಳಗೆ ಇದೇ ಗ್ರಾಮದಲ್ಲಿ ಭೂಕುಸಿತವಾಗಿ ಜನ ಸಂಕಷ್ಟ ಅನುಭವಿಸಿದ್ದರು. ಸುಮಾರು ವರ್ಷಗಳ ಹಿಂದೆ ಹಿರಿಯರು ಮನೆಗಳಲ್ಲಿ ಧಾನ್ಯ ಸಂಗ್ರಹಕ್ಕೆ ನಿರ್ಮಿಸಿದ್ದ ಹಗೆವುಗಳಲ್ಲಿ ನೀರು ತುಂಬಿ ಭೂಕುಸಿತವಾಗಿತ್ತು. ಆದ್ರೆ ಈಗ ಎಲ್ಲಂದರಲ್ಲಿ ಭೂಮಿ ಕುಸಿದಿದೆ. ಗ್ರಾಮಕ್ಕೆ ರಾಯಚೂರು ಸಹಾಯಕ ಆಯುಕ್ತ ವೀರಮಲ್ಲಪ್ಪ ಪೂಜಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದ ಪರಸ್ಥಿತಿ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಪರಿಹಾರ ಕಾರ್ಯ ಕೈಗೊಳ್ಳುವುದಾಗಿ ಹೇಳಿದ್ದಾರೆ.