ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭೂ ಕುಸಿತ ಮುಂದುವರಿದಿದ್ದು, ಮಂಗಳವಾರವೂ ಸಹ ಎನ್.ಆರ್.ಪುರ ತಾಲೂಕಿನ ಖಾಂಡ್ಯ ಬಳಿಯ ಬಿದರೆ ಗ್ರಾಮದಲ್ಲಿ ಭೂ ಕುಸಿತ ಉಂಟಾಗಿದೆ.
ಜಿಲ್ಲೆಯಾದ್ಯಂತ ವರುಣನ ಆರ್ಭಟ ಸದ್ಯಕ್ಕೆ ತಗ್ಗಿದೆ. ಆದರೆ ಮಳೆಯ ನಂತರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭೂ ಕುಸಿತ ಉಂಟಾಗುತ್ತಲೇ ಇದೆ. ಇದರಿಂದಾಗಿ ಜನ ಯಾವಾಗಾ ಏನಾಗುತ್ತೋ ಅನ್ನೋ ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಮಂಗಳವಾರವೂ ಸಹ ಸಂಜೆ ಸುಮಾರು 4.30ರ ವೇಳೆಗೆ ಬಿದಿರೆ ಗ್ರಾಮದ ಸತೀಶ್ ಭಟ್ ಎಂಬವರ ಕಾಫಿ ತೋಟದಲ್ಲಿ ಏಕಾಏಕಿ ಭೂ ಕುಸಿತವುಂಟಾಗಿದ್ದು, ಸುಮಾರು ಒಂದು ಎಕರೆಯಲ್ಲಿ ಬೆಳೆದಿದ್ದ ಅಡಿಕೆ, ಕಾಫಿ ಹಾಗೂ ಮೆಣಸು ಬೆಳೆಗಳು ಸಂಪೂರ್ಣ ನಾಶವಾಗಿ ಹೋಗಿದೆ. ಭೂ ಕುಸಿತದಿಂದಾಗಿ ರೈತ ಕಂಗಾಲಾಗಿ ಹೋಗಿದ್ದು, ಮತ್ತೆ ಎಲ್ಲಿ ಭೂ ಕುಸಿತವಾಗುತ್ತದೆಯೋ ಎನ್ನುವ ಭೀತಿಯಲ್ಲಿದ್ದಾರೆ.
ಬುಧವಾರವು ಸಹ ಮಲೆನಾಡು ಭಾಗದಲ್ಲಿ ಮತ್ತೆ ರಸ್ತೆಗಳು ಕುಸಿತಗೊಂಡಿವೆ. ಇದರಿಂದಾಗಿ ಕಡವಂತಿ ಗ್ರಾಮ ಪಂಚಾಯಿತಿಗೆ ಸೇರುವ ನಾಲ್ಕು ಗ್ರಾಮಗಳು ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಳೆದುಕೊಂಡಿವೆ. ಅಲ್ಲದೇ ಬೊಗಸೆ ವಡ್ಡಿ ಗ್ರಾಮದ ಪ್ರಮುಖ ರಸ್ತೆ ಒಂದು ಕಡೆ ಸಂಪೂರ್ಣವಾಗಿ ಕುಸಿದು ಹೋಗಿದೆ. ಇದರಿಂದಾಗಿ ವಾಹನಗಳು ಸಂಚರಿಸಲಾಗಿದೆ. ಗ್ರಾಮಸ್ಥರು ಕಾಲುನಡಿಗೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv