– ಜಿಲ್ಲೆಯ 19 ಪ್ರದೇಶದಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಮುಂದುವರಿಕೆ
ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಅಬ್ಬರದ ಮಳೆಯು ಸಾಕಷ್ಟು ಅನಾಹುತ ತಂದೊಡ್ಡಿದ್ದು, ನಿರಂತರ ಭೂಕುಸಿತ ಜನರಲ್ಲಿ ಜೀವ ಭಯ ಸೃಷ್ಟಿಸಿದೆ. ಇದೀಗ ಜಿಲ್ಲಾಡಳಿತ ಅತಿ ಹೆಚ್ಚು ಭೂಕುಸಿತ ಪ್ರದೇಶಗಳ ಡೇಂಜರ್ ಝೋನ್ ಪಟ್ಟಿ ಮಾಡಿ ನಿರ್ಬಂಧ ವಿಧಿಸಿದ್ದು, ಭೂಕುಸಿತ ಪ್ರದೇಶದ ಜನರನ್ನು ರಕ್ಷಣೆ ಮಾಡಿದೆ.
ಗುರುವಾರ ಈ ಭಾಗದಲ್ಲಿ ರಸ್ತೆಯ ಮೇಲೆ 30 ಮೀಟರ್‌ಗೂ ಹೆಚ್ಚು ಗುಡ್ಡ ಕುಸಿದು ಕೊಡಸಳ್ಳಿ ವಿದ್ಯುತ್ ಉತ್ಪಾದನಾ ಘಟಕಕ್ಕೆ ಹೋಗುವ ಮಾರ್ಗ ಬಂದ್ ಆಗಿದ್ದು, ವಿದ್ಯುತ್ ಗಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 25 ಜನ ಸಿಬ್ಬಂದಿ ಹಾಗೂ ಕೊಡಸಳ್ಳಿಗೆ ತೆರಳಿದ್ದ ಬಸ್ ಸಹ ಸಂಚರಿಸಲಾಗದೇ ಸಿಲುಕಿಕೊಂಡಿತು. ಇದರ ನಂತರ ತಕ್ಷಣ ಕಾರ್ಯಾಚರಣೆಗೆ ಇಳಿದ ಜಿಲ್ಲಾಡಳಿತ ಹಾಗೂ ಕೆಪಿಸಿ ಇಲಾಖೆಯವರು ಓರ್ವ ಕಾಲೇಜು ವಿದ್ಯಾರ್ಥಿನಿ ಸೇರಿ ಆರು ಜನರನ್ನು ರಕ್ಷಿಸಿ ಸ್ಥಳಾಂತರಿಸಿದ್ದಾರೆ. ಇದೇ ಭಾಗದಲ್ಲಿ ಬಾಳೆಮನೆ, ಸುಳಗೇರಿ ಗ್ರಾಮವಿದ್ದು, 150 ಕ್ಕೂ ಹೆಚ್ಚು ಜನರಿರುವ ಈ ಊರಿಗೆ ಸಂಪರ್ಕ ಕಡಿತವಾಗಿದೆ. ಇದಲ್ಲದೇ ನದಿ ಭಾಗದಲ್ಲಿ ಕಿಲೋಮೀಟರ್ ಗಟ್ಟಲೇ ನಡೆದುಕೊಂಡು ಬಂದು ರಸ್ತೆ ಸಂಪರ್ಕ ಮಾಡಬೇಕಿದ್ದು, ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶ | ಭಾರೀ ಮಳೆಗೆ 37 ಮಂದಿ ಸಾವು – 400 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಹಾನಿ
ಕೊಡಸಳ್ಳಿ ಭಾಗದಲ್ಲಿ ಸ್ಥಳೀಯ ಭೂವಿಜ್ಞಾನಿಗಳ ತಂಡ ಅಧ್ಯಯನ ನಡೆಸಿದ್ದು, ಮತ್ತೆ ಭೂ ಕುಸಿಯುವ ಸಾಧ್ಯತೆಯನ್ನು ತಿಳಿಸಿದೆ. ಇದಲ್ಲದೇ ಭೂವಿಜ್ಞಾನಿಗಳ ತಂಡ ಸಹ ಈ ಹಿಂದೆಯೇ ಕೊಡಸಳ್ಳಿ ಭಾಗದಲ್ಲಿ ಹೆಚ್ಚಿನ ಭೂಕುಸಿತವಾಗುವ ಸಾಧ್ಯತೆ ಕುರಿತು ವರದಿ ಸಹ ನೀಡಿತ್ತು. ಇವೆಲ್ಲವನ್ನೂ ಪರಿಗಣಿಸಿದ ಜಿಲ್ಲಾಡಳಿತ ಕೊಡಸಳ್ಳಿ ಭಾಗದಲ್ಲಿ ಜನ ಸಂಚಾರಕ್ಕೆ ನಿರ್ಬಂಧ ಹೇರಿದೆ. ಇದರ ಜೊತೆಗೆ ಈ ಭಾಗದಲ್ಲಿ ಭೂಕುಸಿತದ ಪ್ರಮಾಣ ತಗ್ಗುವ ವರೆಗೆ ಬಿದ್ದ ಮಣ್ಣನ್ನು ತೆರವು ಮಾಡದಿರಲು ತೀರ್ಮಾನಿಸಿದ್ದು, ವಿದ್ಯುತ್ ಗಾರ ಹಾಗೂ ಗ್ರಾಮಗಳಿಗೆ ಜನ ತೆರಳಲು ಎರಡು ಬೋಟ್ ವ್ಯವಸ್ಥೆ ಮಾಡಿದೆ. ಹವಾಮಾನ ಇಲಾಖೆ ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾಗುವ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ವಿಜ್ಞಾನಿಗಳ ತಂಡಕ್ಕೆ ಭೂಕುಸಿತ ಪ್ರದೇಶದ ಈಗಿನ ಪರಿಸ್ಥಿತಿ ವರದಿ ಸಲ್ಲಿಸಲು ಕೋರಿದೆ. ಈ ವರದಿ ಆಧರಿಸಿ ಜಿಲ್ಲಾಡಳಿತ ಶಿರೂರಿನಲ್ಲಿ ಆದ ಪ್ರಾಣಹಾನಿಯಾದಂತೆ ಇತರೆಡೆ ಪ್ರಾಣ ಹಾನಿ ತಪ್ಪಿಸಲು ಕ್ರಮ ಕೈಗೊಳ್ಳುತ್ತಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 439 ಭೂಪ್ರದೇಶಗಳು ಅತಿ ಸೂಕ್ಷ್ಮ ಭೂಕುಸಿತ ವಲಯವಿದ್ದು, ಇವುಗಳಲ್ಲಿ 21 ಭಾಗಗಳು ಅತಿ ಅಪಾಯವಿರುವ ವರದಿಯನ್ನು ಭೂವಿಜ್ಞಾನಿಗಳು ನೀಡಿದ್ದಾರೆ. ಸದ್ಯ ಜಿಲ್ಲಾಡಳಿತ 19 ಭಾಗದ ಭೂಕುಸಿತ ಪ್ರದೇಶದಲ್ಲಿ ವಾಹನ ನಿಲುಗಡೆಗೆ ನಿರ್ಬಂಧ ಹೇರಿದ್ದು, ಶಿರೂರು, ಕೊಡಸಳ್ಳಿ ಭಾಗದಲ್ಲಿ ಜನರ ಓಡಾಟಕ್ಕೆ ನಿಷೇಧ ಹೇರಿದೆ. ಈ ಮೂಲಕ ಶಿರೂರು ಭೂಕುಸಿತದಲ್ಲಿ ಆದ ಪ್ರಾಣಹಾನಿ ಇತರೆಡೆ ಆಗದಂತೆ ಎಚ್ಚರ ವಹಿಸುವ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿದೆ. ಇದನ್ನೂ ಓದಿ: ಗುತ್ತಿಗೆದಾರನ ಹತ್ಯೆ ಆರೋಪಿ ಮನೆಗೆ ಬೆಂಕಿ – 6 ಜನ ಅರೆಸ್ಟ್