ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಡ್ಯಾಂ ಅಂದ್ರೆ ಹಳೆ ಮೈಸೂರು ಭಾಗದ ಜೀವನಾಡಿಯಾಗಿದೆ. ಈ ಭಾಗದಲ್ಲಿ ಆಗಾಗ್ಗೆ ಒಂದಲ್ಲಾ ಒಂದು ಅಕ್ರಮ ವಿಚಾರಗಳು ಬೆಳಕಿಗೆ ಬರುತ್ತಿವೆ. ಇಷ್ಟು ದಿನಗಳ ಕಾಲ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಬಳಿಕ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆಗೆ ನಿಷೇಧ ಹೇರಲಾಗಿದೆ. ಇದೀಗ KRS ಅಣೆಕಟ್ಟೆಯ ಹಿನ್ನೀರಿನ ವ್ಯಾಪ್ತಿಯಲ್ಲಿನ ಪ್ರದೇಶವನ್ನು ಉಳ್ಳವರು ಹೊತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದು ಹೀಗೆ ಮುಂದುವರಿದರೆ KRS ಡ್ಯಾಂನ ನೀರಿನ ಸಂಗ್ರಹ ಸಹ ಕಡಿಮೆ ಆಗುತ್ತದೆ.
KRS ಡ್ಯಾಂನ ಹಿನ್ನೀರಿನ ಪ್ರದೇಶವಾದ ಪಾಂಡವಪುರ ತಾಲೂಕಿನ ಚಿಕ್ಕಾಯಾರಹಳ್ಳಿ ಗ್ರಾಮದ 279ನೇ ಸರ್ವೇ ನಂಬರ್‍ನಲ್ಲಿ ಕೇರಳ ಮೂಲಕ ನಖೇಶ್ ಜಾನ್ ತೆರಿಯನ್ ಮ್ಯಾಥ್ಯೋ ಎಂಬಾತನ ಜಮೀನು ಇದೆ. ಆತ ಇದೀಗ ತನ್ನ ಜಮೀನಿನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ KRS ಡ್ಯಾಂ ಹಿನೀರಿನ ಪ್ರದೇಶವನ್ನು ಅತಿಕ್ರಮ ಮಾಡಿಕೊಳ್ಳಲು ಈ ವ್ಯಕ್ತಿ ಮುಂದಾಗಿದ್ದಾನೆ. ತನ್ನ ಜಮೀನ ತಂತಿ ಬೇಲಿಯನ್ನು ಬಿಟ್ಟು ಹಿನ್ನೀರಿನ ಪ್ರದೇಶದಲ್ಲಿ ಜೆಸಿಬಿ ಮೂಲಕ ಟ್ರಂಚ್ ಹೊಡೆಸಿ ಅದರಲ್ಲಿ ದೊಡ್ಡ ದೊಡ್ಡ ಬಂಡೆಗಳನ್ನು ಹಾಕಲಾಗಿದೆ. ಬಳಿಕ ಕಾಂಪೌಂಡ್ ಕಟ್ಟಿ ಜಾಗ ವಶಪಡಿಸಿಕೊಳ್ಳಬೇಕೆಂದು ಈ ವ್ಯಕ್ತಿ ಮುಂದಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ನಖೇಶ್ ಜಾನ್ ತೆರಿಯನ್ ಮ್ಯಾಥ್ಯೋ ಶ್ರೀರಂಗಪಟ್ಟಣದ ಕೆಲ ರಾಜಕೀಯ ಮುಖಂಡರ ಪ್ರಭಾವ ಬೆಳೆಸಿ ಈ ಕೆಲಸಕ್ಕೆ ಮುಂದಾಗಿದ್ದಾನೆ ಎಂದು ಸ್ಥಳೀಯರು ಆರೋಪ ಮಾಡ್ತಾ ಇದ್ದಾರೆ. ಇದನ್ನೂ ಓದಿ: ಅಂದು ಪರವಾಗಿ ದೂರು ನೀಡಿದ್ದ ಯುವಕನಿಂದ ಈಗ ಸೂರಜ್ ವಿರುದ್ಧವೇ ದೂರು, ಎಫ್‌ಐಆರ್ ದಾಖಲು
ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಕೇಳಿದ್ರೆ, ಈ ಬಗ್ಗೆ ನಮಗೆ ಮಾಹಿತಿ ಬಂದಿದೆ. ಜೆಸಿಬಿ ಮೂಲಕ ಟ್ರಂಚ್ ಹೊಡೆಸುವ ವೇಳೆ ನಮ್ಮ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಟ್ರಂಚ್ ಕೆಲಸವನ್ನು ನಿಲ್ಲಿಸಿದ್ದಾರೆ. ಈ ಬಗ್ಗೆ ತಹಶಿಲ್ದಾರ್ ಸಮ್ಮುಖದಲ್ಲಿ ಸರ್ವೇ ಮಾಡಬೇಕೆಂದು ಸಂಬಂಧ ಪಟ್ಟವರ ಗಮನಕ್ಕೆ ತರಲಾಗಿದೆ. ಮೇಲ್ನೋಟಕ್ಕೆ KRS ಡ್ಯಾಂನ ಹಿನ್ನೀರಿನ ಪ್ರದೇಶವನ್ನು ಹೊತ್ತುವರಿ ಮಾಡುತ್ತಿರೋದು ಕಂಡುಬಂದಿದೆ. ಸರ್ವೆ ಬಳಿಕ ಡ್ಯಾಂ ಜಾಗವನ್ನು ಬಿಡಿಸಿಕೊಂಡು ಅಕ್ರಮ ಎಸಗಲು ಮುಂದಾದವರ ವಿರುದ್ಧ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳ್ತಾ ಇದ್ದಾರೆ.
ಒಟ್ಟಾರೆ ಕೆ.ಆರ್.ಎಸ್ ಹಿನ್ನೀರಿನ ಪ್ರದೇಶದಲ್ಲಿ ಈ ರೀತಿ ಅತಿಕ್ರಮ ಕೆಲಸಗಳು ಆಗ್ಗಾಗ್ಗೆ ನಡೆಯುತ್ತಲೆ ಇವೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಲಿಲ್ಲ ಎಂದರೆ ಡ್ಯಾಂನ ನೀರಿ ಸಂಗ್ರಹದ ಪ್ರಮಾಣ ಕಡಿಮೆ ಆಗುವುದರಲ್ಲಿ ಸಂಶಯವೇ ಇಲ್ಲ.