ರಾಯಚೂರು: ಜಿಲ್ಲೆಯ ಸರ್ಜಾಪುರ ಗ್ರಾಮದಲ್ಲಿ ಎರಡು ರೈತ ಕುಟುಂಬಗಳ ನಡುವಿನ ಜಮೀನು ವಿವಾದ ಮಾರಾಮಾರಿ ಹಂತಕ್ಕೆ ತಲುಪಿ ಹೊಡೆದಾಡಿಕೊಂಡಿದ್ದಾರೆ. ರೈತ ಹನುಮಂತ ಹಾಗೂ ಆತನ ಪತ್ನಿ ಶಾಂತಮ್ಮ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ಗುಂಪಿನವರು ಕೂಡ ಘಟನೆ ವೇಳೆ ಗಾಯಗೊಂಡಿದ್ದಾರೆ.
ರೈತ ಹನುಮಂತ ಕುಟುಂಬ ಕಳೆದ 50 ವರ್ಷಗಳಿಂದ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇದೇ ಜಮೀನಿನಲ್ಲಿ ನಮ್ಮ ಜಮೀನಿನ ಜಾಗ ಇದೆ ಅಂತ ದೊಡ್ಡಮಲ್ಲೇಶ್, ಗೋವಿಂದ್, ಮಲ್ಲೇಶ್, ಮಹಾನಂದಿ ಹಾಗೂ ವೀರೇಶ್ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಜಗಳಕ್ಕೆ ಮುಂದಾಗಿದ್ದಾರೆ. ಊರಿನ ಗ್ರಾಮಸ್ಥರು ಸೇರಿ ರಾಜಿ ಪಂಚಾಯತಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲ್ಲ. ಈಗ ಏಕಾಏಕೀ ಜಮೀನಿಗೆ ಬಂದವರು ರೈತ ಹನುಮಂತನ ಮೇಲೆ ಟ್ರ್ಯಾಕ್ಟರ್ ಹಾರಿಸಿ ಅಟ್ಟಹಾಸ ಮೆರೆದಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ಆರೋಪ – ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ
ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಹನುಮಂತನ ಜೊತೆ ಗೋವಿಂದ್ ಹಾಗೂ ಕುಟುಂಬಸ್ಥರು ಗಲಾಟೆ ಮಾಡಿದ್ದಾರೆ. ದೌರ್ಜನ್ಯದಿಂದ ರೈತನ ಹೊಲವನ್ನು ಒತ್ತುವರಿ ಮಾಡಿಕೊಳ್ಳಲು ಮುಂದಾದಾಗ ಗಲಾಟೆ ನಡೆದಿದೆ. ಆಗ ಏಕಾಏಕೀ ಹನುಮಂತನನ್ನು ನಾಲ್ಕೈದು ಜನರು ಹಿಡಿದುಕೊಂಡು ಟ್ರ್ಯಾಕ್ಟರ್‌ಗೆ ಅಡ್ಡಲಾಗಿ ಮಲಗಿಸಿ ಟ್ರಾಕ್ಟರ್ ಮೇಲತ್ತಿಸಲು ಮುಂದಾಗಿದ್ದಾರೆ. ಆಗ ಪ್ರತಿರೋಧ ತೋರಿದ ಹನುಮಂತನಿಗೆ ಗಂಭೀರ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರೈತನ ಪತ್ನಿ ಶಾಂತಮ್ಮರಿಗೂ ಗಾಯಗಳಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕಬೇಕಿಲ್ಲ, ಇನ್ಮುಂದೆ ಮಂದಿರ ಹೋರಾಟದಲ್ಲಿ ನಾವಿಲ್ಲ: ಮೋಹನ್ ಭಾಗವತ್
ಗಲಾಟೆಯಲ್ಲಿ ಇನ್ನೊಂದು ಗುಂಪಿನವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಹಾಡಹಗಲೇ ಅಟ್ಟಹಾಸ ಮೆರೆದ ಕೃತ್ಯಕ್ಕೆ ಇಡೀ ಸರ್ಜಾಪುರದ ಜನ ಬೆಚ್ಚಿಬಿದ್ದಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲದೇ ಇರುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.