ಬೆಳಗಾವಿ: ಜಿಲ್ಲೆಯಲ್ಲೊಂದು ಭಯಾನಕ ಘಟನೆ ನಡೆದಿದ್ದು ಏಕಾಏಕಿ ಕಿ.ಮೀ ಗಟ್ಟಲೇ ಭೂಮಿ ಬಾಯಿ ಬಿಡುತ್ತಿದೆ. ಭೂಮಿ ಬಾಯಿ ಬಿಡುತ್ತಿರುವ ದೃಶ್ಯ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕುಳ್ಳುರು ಗ್ರಾಮದಲ್ಲಿ ಕಂಡು ಬಂದಿದೆ. ಈ ದೃಶ್ಯ ನೋಡಿದ ಇಲ್ಲಿನ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಈ ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿರುವ ಭೂಮಿ ದೊಡ್ಡ ಪ್ರಮಾಣದಲ್ಲಿ ಕುಸಿಯಲಾರಂಭಿಸಿದೆ. ಕುಳ್ಳುರ್ ನಿಂದ ಬಿಚಗುತ್ತಿ ತಿಮ್ಮಾಪುರ್ ಸೇರಿ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲೂ ಕೂಡ ಭೂಮಿ ಕುಸಿದಿದ್ದು ಸುರಂಗದಂತಾಗಿ ಇಲ್ಲಿ ಮಾರ್ಪಟ್ಟಿದೆ. ಈ ಕಾರಣಕ್ಕೆ ರಸ್ತೆಯಲ್ಲಿ ಕಲ್ಲಿಟ್ಟು ಎಚ್ಚರಿಕೆ ಬೋರ್ಡ್ ಕೂಡ ಹಾಕಿ ಜನರನ್ನ ಆ ಕಡೆ ಓಡಾಡದಂತೆ ಸ್ಥಳೀಯರು ನೋಡಿಕೊಳ್ಳುತ್ತಿದ್ದಾರೆ.
ಆರು ತಿಂಗಳ ಹಿಂದೆಯೇ ಸ್ವಲ್ಪ ಪ್ರಮಾಣದಲ್ಲಿ ಬಿರುಕು ಬಿಟ್ಟಿದ್ದ ಭೂಮಿ ಈಗ ಏಕಾಏಕಿ ಕುಸಿಯುತ್ತಿರುವುದರಿಂದ ಗ್ರಾಮಸ್ಥರು ಆ ಕಡೆ ಸುಳಿಯುವುದನ್ನೇ ಬಿಟ್ಟಿದ್ದಾರೆ. ಸುಮಾರು ಎರಡು ಕಿ.ಮೀ ನಷ್ಟು ಭೂಮಿ ಕುಸಿದಿದ್ದು ನಿತ್ಯವೂ ಇದರ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿದೆ. ಈ ಕುರಿತು ರಾಮದುರ್ಗ ತಹಶೀಲ್ದಾರರ ಗಮನಕ್ಕೆ ತಂದರೆ ಅದು ನನಗೆ ಸಂಬಂಧ ಇಲ್ಲ. ಬೇಕಾದರೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹೇಳಿ ಎಂದು ಹಾರಿಕೆಯ ಉತ್ತರ ಕೊಡುತ್ತಿದ್ದಾರೆ.
ಇತ್ತ ಇಪ್ಪತ್ತರಿಂದ ಮೂವತ್ತು ಅಡಿಯಷ್ಟು ಭೂಮಿ ಕೆಳಭಾಗದಲ್ಲಿ ಕುಸಿದಿದ್ದು ಪ್ರಳಯದ ಆತಂಕ ಇಲ್ಲಿ ಸೃಷ್ಟಿಯಾಗಿದೆ. ಕೆಲವರು ದೇವರ ಮೊರೆ ಹೋದರೆ ಮತ್ತೆ ಕೆಲವರು ಭೂವಿಜ್ಞಾನಿಗಳ ಮೊರೆ ಹೋಗಿ ಭೂ ಕುಸಿತದ ಕಾರಣ ಹುಡುಕುತ್ತಿದ್ದಾರೆ. ಆದರೆ ಇಷ್ಟೆಲ್ಲಾ ಆದರೂ ಕೂಡ ಅಧಿಕಾರಿಗಳು ಮಾತ್ರ ಇಲ್ಲಿ ಬಾರದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.