– ಮನೆ ಮೇಲೆ ಕಲ್ಲು ತೂರಾಟ
– ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಗಳು ಮತ್ತೆ ಬಾಲ ಬಿಚ್ಚುತ್ತಿದ್ದು, ದಾಂಧಲೆ ಎಬ್ಬಿಸುತ್ತಿದ್ದಾರೆ. ಸುಮಾರು ಇನ್ನೂರಕ್ಕೂ ಹೆಚ್ಚು ರೌಡಿಗಳು ಮನೆ ಮೇಲೆ ಕಲ್ಲು ಎಸೆದು, ಸುತ್ತಿಗೆಯಿಂದ ಡೋರ್ ಒಡೆದು ದರ್ಪ ಮೆರೆದಿದ್ದಾರೆ.
Advertisement
ನಗರದ ಬೆಳ್ಳಂದೂರಿನ ಎಕೊ ಸ್ಪೇಸ್ ಬಳಿ ಘಟನೆ ನಡೆದಿದ್ದು, ಜಮೀನಿನ ವಿವಾದಕ್ಕಾಗಿ ಗಲಾಟೆ ನಡೆದಿದೆ. 2004ರಲ್ಲಿ ಲಕ್ಷ್ಮಪ್ಪ ಅವರ ಜಮೀನನ್ನು ಕೆಐಎಡಿಬಿ ವಶಕ್ಕೆ ಪಡೆದಿತ್ತು. ಅಂದಿನಿಂದ ಲಕ್ಷ್ಮಪ್ಪ ಕುಟುಂಬ ಕೋರ್ಟ್ ಮೂಲಕ ಸ್ಟೇ ತಂದಿದ್ದಾರೆ. ಹೈಕೋರ್ಟ್ ನಲ್ಲಿ ಅರ್ಜಿ ಹಾಕಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಎರಡು ತಿಂಗಳ ಸಮಯ ನೀಡಿದೆ. ಆದರೆ ಶನಿವಾರ ಮಧ್ಯಾಹ್ನ ಏಕಾಏಕಿ 200ಕ್ಕೂ ಹೆಚ್ಚು ಬಾಡಿಗೆ ರೌಡಿಗಳು ಮನೆಯ ಬಳಿ ಬಂದು ಗಲಾಟೆ ಮಾಡಿದ್ದು, ಮನೆಯ ಮೇಲೆ ಕಲ್ಲು ತೂರಿ, ಕುಟುಂಬದ ಸದಸ್ಯರ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ.
Advertisement
ಲಕ್ಷ್ಮಯ್ಯರ ಸಹೋದರ ಮುನಿರಾಜು ಹಾಗೂ ಪ್ರಜ್ವಲ್ ಅವರ ಮೇಲೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಯುವತಿಯನ್ನು ಎಳೆದಾಡಿ ಡ್ರೈನೇಜ್‍ಗೆ ಎಸೆದು ಬಾಡಿಗೆ ರೌಡಿಗಳು ಪುಂಡಾಟ ಮೆರೆದಿದ್ದಾರೆ. ಶ್ರೀ ಸತ್ಯ ಸಾಯಿ ನಾರಾಯಣ ಪ್ರೈವೇಟ್ ಲಿಮಿಟೆಡ್ ನವರೇ ಈ ಕೆಲಸ ಮಾಡಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.
Advertisement
Advertisement
ಘಟನೆ ಕುರಿತು ಬೆಳ್ಳಂದೂರು ಪೊಲೀಸರಿಗೆ ದೂರು ನೀಡಲು ಹೋದರೆ ದೂರು ತೆಗೆದುಕೊಳ್ಳದೆ ನಿರಾಕರಿಸಿದ್ದಾರೆ. ಇತ್ತ ಪುಡಿ ರೌಡಿಗಳು ಮನೆ ಬಳಿ ನೈಟ್ ಬೀಟ್ ಹಾಕುತ್ತಿದ್ದಾರೆ. ಹೀಗಾಗಿ ಕುಟುಂಬಸ್ಥರು ಜೀವ ಭಯದಲ್ಲೇ ಕಾಲ ಕಳೆಯುವಂತಾಗಿದೆ ಎಂದು ಮನೆಯವರು ಅಳಲು ತೋಡಿಕೊಂಡಿದ್ದಾರೆ.