– ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಆಟೋ ಚಾಲಕನ ರಕ್ಷಣೆ
ಬೆಳಗಾವಿ: ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಮಳೆಯ ಅರ್ಭಟ ಮುಂದುವರಿದೆ. ಬೆಳಗಾವಿಯಿಂದ ಮಹಾರಾಷ್ಟ್ರವನ್ನು ಸಂಪರ್ಕಿಸುವ ಏಕೈಕ ಮಾರ್ಗವಾಗಿದ್ದ ಪುಣೆ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಭೂ ಕುಸಿತ ಸಂಭವಿಸಿದೆ.
ಈ ಕುರಿತು ಉತ್ತರ ಐಜಿಪಿ ರಾಘವೇಂದ್ರ ಸುಹಾಸ್ ಮಾಹಿತಿ ನೀಡಿದ್ದು, ಭೂಕುಸಿತದಿಂದ ಪುಣೆ ಬೆಂಗಳೂರು ರಸ್ತೆ ಸಂಪರ್ಕ ಕಡಿತವಾಗಿದೆ. ಪರಿಣಾಮ ನಾಳೆ ಮಧ್ಯಾಹ್ನ ವರೆಗೂ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬೆಳಗಾವಿಯಿಂದ ಕೊಲ್ಲಾಪುರ ಕಡೆಗೆ ಯಾರು ಪ್ರಯಾಣ ಮಾಡದಂತೆ ಮನವಿ ಐಜಿಪಿ ರಾಘವೇಂದ್ರ ಸುಹಾಸ್ ಮಾಡಿದ್ದಾರೆ.
Advertisement
ಭೂ ಕುಸಿತ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದಲೇ ರಾಜ್ಯದ ಗಡಿಯಲ್ಲಿ ವಾಹನ ಸ್ಥಗಿತಗೊಳಿಸಿದ್ದಾಗಿ ಬೆಳಗಾವಿ ಪೊಲೀಸರು ಮಾಹಿತಿ ನೀಡಿದ್ದಾರೆ. ಬೆಳಗಾವಿಯಿಂದ ಮಹಾರಾಷ್ಟ್ರಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಗಳಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯವನ್ನು ಕಾಣಬಹುದಾಗಿದೆ.
Advertisement
ಇತ್ತ ಜಿಲ್ಲೆಯ ಅಥಣಿ ತಾಲೂಕಿನ ತೀರ್ಥ ಗ್ರಾಮದ ಬಳಿ ಕೃಷ್ಣ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಆಟೋ ಚಾಲಕನನ್ನು ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಕೃಷ್ಣ ನದಿಯ ನೀರನ ಪ್ರವಾಹ ಹೆಚ್ಚಾಗಿದ್ದು, ನದಿ ದಡಕ್ಕೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಆದರೆ ಅಧಿಕಾರಿಗಳ ಎಚ್ಚರಿಕೆಯ ನಡುವೆಯೂ ಸೇತುವೆ ದಾಟಲು ಯತ್ನಿಸಿದ್ದ ಸಂದರ್ಭದಲ್ಲಿ ಆಟೋ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿತ್ತು. ಈ ಸಂದರ್ಭದಲ್ಲಿ ಜೀವ ರಕ್ಷಣೆಗೆ ಚಾಲಕ ಆಟೋ ಮೇಲ್ ಭಾಗದಲ್ಲಿ ನಿಂತಿದ್ದ ಇದನ್ನು ಕಂಡ ಗ್ರಾಮಸ್ಥರು ಆತನನ್ನು ರಕ್ಷಣೆ ಮಾಡಿದ್ದಾರೆ.